ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕುಡಿದ ಮತ್ತಿನಲ್ಲಿ ನಾಡ ಬಂದೂಕಿನಿಂದ ಗುಂಡು ಹೊಡೆದುಕೊಂಡು 22 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಬಳಿಯ ಮುಡೇಸರ ಪ್ರದೇಶದಲ್ಲಿ ನಡೆದಿದೆ.
ರವೀಶ್ ಮಾದೇವ ನಾಯ್ಕ (22) ಮೃತ ಯುವಕ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ರವೀಶ್ ಮದ್ಯ ವ್ಯಸನಿಯಾಗಿದ್ದು, ಇತ್ತೀಚೆಗೆ ಪ್ರೇಮ ವೈಫಲ್ಯದಿಂದ ಮನನೊಂದು ಇದ್ದ ಎನ್ನಲಾಗಿದೆ.
ಮಂಗಳವಾರ ರಾತ್ರಿ ಮನೆಯಿಂದ ಹೊರಟಿದ್ದ ರವೀಶ್, ಮನೆಯ ಪಕ್ಕದ ಅರಣ್ಯ ಪ್ರದೇಶಕ್ಕೆ ತೆರಳಿ ನಾಡ ಬಂದೂಕಿನಿಂದ ತಾನೇ ತಾನಾಗಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಕುಟುಂಬದವರು ಹಾಗೂ ಸ್ಥಳೀಯರು ಯುವಕನನ್ನು ರಕ್ತದ ಮಡುವಿನಲ್ಲಿ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
