ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಕೇಂದ್ರದ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕ ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕೀಯ ಅಖಾಡಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗೆ ಇದೀಗ ಮತ್ತಷ್ಟು ಬಲ ದೊರೆತಿದೆ. ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲು ಅವರು ಸಜ್ಜಾಗಿರುವುದು, ಅವರ ಎರಡನೇ ಇನ್ನಿಂಗ್ಸ್ ಆರಂಭದ ಸೂಚನೆಯಾಗಿ ರಾಜಕೀಯ ವಲಯದಲ್ಲಿ ವ್ಯಾಖ್ಯಾನಗೊಳ್ಳುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯ ಮತ್ತು ಪಕ್ಷದ ಸಂಘಟನಾ ಚಟುವಟಿಕೆಗಳಿಂದ ದೂರ ಉಳಿದಿದ್ದ ಹೆಗಡೆ, ಇದೀಗ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಗಮನ ಸೆಳೆಯುತ್ತಿದೆ. ವಿಶೇಷವಾಗಿ, ತಮ್ಮ ರಾಜಕೀಯ ಪಯಣಕ್ಕೆ ಬಲ ನೀಡಿದ ಭಟ್ಕಳ ನೆಲೆಯಲ್ಲಿಯೇ ಮರುಪ್ರವೇಶಕ್ಕೆ ವೇದಿಕೆ ಸಿದ್ಧವಾಗಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ.
ಸಂಘ ಪರಿವಾರದ ಮನವೊಲಿಕೆ?
ಕಾರ್ಯಕ್ರಮ ಆಯೋಜನೆಗೆ ಮುನ್ನ ಸಂಘ ಪರಿವಾರದ ಹಿರಿಯ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಅವರ ಮನವೊಲಿಕೆಯ ನಂತರವೇ ಹೆಗಡೆ ‘ಹಿಂದೂ ಸಂಗಮ’ ವೇದಿಕೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ರಾಜಕೀಯ ಸಂದೇಶ ಹೊತ್ತ ವೇದಿಕೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಭಟ್ಕಳದಲ್ಲಿ ಭರ್ಜರಿ ಸಿದ್ಧತೆ
ಹೆಗಡೆಯವರ ಆಗಮನದ ಹಿನ್ನಲೆಯಲ್ಲಿ ಭಟ್ಕಳದಲ್ಲಿ ಭಾರೀ ಸ್ವಾಗತದ ಸಿದ್ಧತೆಗಳು ನಡೆಯುತ್ತಿವೆ. ನಗರ ಪ್ರವೇಶಕ್ಕೂ ಮುನ್ನ ಭವ್ಯ ರೋಡ್‌ಶೋ ಹಾಗೂ ನೂರಕ್ಕೂ ಹೆಚ್ಚು ವಾಹನಗಳ ರ್ಯಾಲಿ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಕರೆತರುವ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಬೆಂಬಲಿಗರಲ್ಲಿ ಉತ್ಸಾಹ ಹೆಚ್ಚಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಗಡೆಯವರ ಮರುಪ್ರವೇಶದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಇದೀಗ ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆ ಆ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಧಿಕೃತ ರಾಜಕೀಯ ಘೋಷಣೆ ಇನ್ನೂ ಹೊರಬಿದ್ದಿಲ್ಲವಾದರೂ, ಈ ಬೆಳವಣಿಗೆಗಳು ಅವರ ಸಕ್ರಿಯ ರಾಜಕೀಯ ಮರಳುವಿಕೆಗೆ ದಿಕ್ಕು ತೋರಿಸುತ್ತಿವೆ.
ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ
ಭಾರತೀಯ ಜನತಾ ಪಕ್ಷ ಸಂಘಟನೆಯೊಳಗಿನ ಸಮೀಕರಣಗಳು, ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಸಮತೋಲನ ಮತ್ತು ಮುಂದಿನ ಚುನಾವಣಾ ತಂತ್ರಗಳ ಹಿನ್ನೆಲೆಯಲ್ಲಿ ಹೆಗಡೆಯವರ ಪಾತ್ರ ಏನಾಗಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಿದೆ.
ವರ್ಷಗಳ ವಿರಾಮದ ಬಳಿಕ ಅವರ ಮರುಪ್ರವೇಶ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅವರ ಎರಡನೇ ಇನ್ನಿಂಗ್ಸ್ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
