ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಜಿಲ್ಲೆಯ ಹೆದ್ದಾರಿಗಳಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆ ಯಲ್ಲಾಪುರ ಸಮೀಪದ ಅರಬೈಲ್ ಘಾಟ್ನಲ್ಲಿ ಪೇಪರ್ ರೋಲ್‌ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ತೆಲಂಗಾಣ ರಾಜ್ಯದ ಭದ್ರಾಚಲಂನಿಂದ ಮಣಿಪಾಲ ಕಡೆಗೆ ಪೇಪರ್ ರೋಲ್‌ಗಳನ್ನು ಸಾಗಿಸುತ್ತಿದ್ದ ಲಾರಿ ಫೆಬ್ರವರಿ 24ರಂದು ಮಧ್ಯಾಹ್ನ ಸುಮಾರು 12.30ರ ಸುಮಾರಿಗೆ ಅರಬೈಲ್ ಘಾಟ್‌ನ ಎಸ್-ಕ್ರಾಸ್ ತಿರುವಿನಲ್ಲಿ ಬಂದಾಗ ಈ ಅವಘಡ ಸಂಭವಿಸಿದೆ. ಲಾರಿ ಚಾಲಕ ಸಂಗು ಶ್ರೀನಿವಾಸ (50) ಅವರು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಘಾತದ ತೀವ್ರತೆಗೆ ಲಾರಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಲಾರಿಯಲ್ಲಿದ್ದ ಕ್ಲೀನರ್ ಗೋರೆ ಗಣೇಶ (45) ಅವರ ಎಡಗೈ ಮೊಣಕೈ ಹಾಗೂ ಬಲಗಾಲಿನ ಹಿಮ್ಮಡಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಚಾಲಕ ಶ್ರೀನಿವಾಸ ಅವರಿಗೆ ಎಡ ತೋಳು ಮತ್ತು ಪಕ್ಕೆಲುಬಿಗೆ ಗಾಯಗಳಾಗಿವೆ. ಗಾಯಾಳುಗಳಿಬ್ಬರೂ ತೆಲಂಗಾಣದ ಭದ್ರಾದ್ರಿ ಕೊತ್ತಗುಡಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

ಈ ಸಂಬಂಧ ಶೇಖ ಯಾಕೂಬ ಅವರು ನೀಡಿದ ದೂರಿನನ್ವಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟ್ಟ ಪ್ರದೇಶಗಳಲ್ಲಿ ವಾಹನ ಚಾಲನೆ ವೇಳೆ ವಿಶೇಷ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

 

Please Share: