ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡ ಘಟನೆ ಫೆ.22ರಂದು ನಡೆದಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೌಕಾನೆಲೆಯ ಸಿವಿಲಿಯನ್ ಉದ್ಯೋಗಿಯಾಗಿರುವ ಮಾಲತೇಶ ಸುರೇಶ ಪೂಜಾರಿ (32) ಹಾಗೂ ಅವರ ಪತ್ನಿ ಅನೀತಾ ಪೂಜಾರಿ (30) ಅವರು ಅಮದಳ್ಳಿ ಕಡೆಯಿಂದ ಕಾರವಾರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಬೆಳಿಗ್ಗೆ ಸುಮಾರು 10:10ರ ಸುಮಾರಿಗೆ ಚೆಂಡಿಯಾ ಪಂಚಾಯತಿ ವ್ಯಾಪ್ತಿಯ ಐಸ್ ಫ್ಯಾಕ್ಟರಿ ಸಮೀಪ ಅರ್ಗಾ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ದೂರಿನ ಪ್ರಕಾರ, ನೌಕಾನೆಲೆಯ ನಿವಾಸಿ ಸವಿತಾ ಸತೀಶ ಕುಮಾರ ಅವರು ಕಾರನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಏಕಾಏಕಿ ಕಾರವಾರದ ಕಡೆಗೆ ಯೂ-ಟರ್ನ್ ಮಾಡಲು ಯತ್ನಿಸಿದಾಗ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಅಪಘಾತದ ಪರಿಣಾಮ ಮಾಲತೇಶ ಅವರಿಗೆ ಬಲಗೈ, ಬಲಗಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದರೆ, ಅನೀತಾ ಅವರಿಗೆ ತಲೆಯ ಬಲಬದಿ, ಹುಬ್ಬು ಮತ್ತು ಕೆನ್ನೆಗೆ ತೀವ್ರ ಗಾಯಗಳಾಗಿವೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕಿ ಸವಿತಾ ವಿರುದ್ಧ ಸೆಕ್ಷನ್ 281 ಹಾಗೂ 125(ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

 

Please Share: