ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ಬಾಂಡಿಶಿಟ್ಟಾ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ಯಾಸೆಂಜರ್ ಆಟೋರಿಕ್ಷಾ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಬೆಳಿಗ್ಗೆ 7.40ರ ಸುಮಾರಿಗೆ ಹಬ್ಬುವಾಡದ ನ್ಯೂ ಕೆಎಚ್‌ಬಿ ಕಾಲೋನಿ ನಿವಾಸಿ ಅಬ್ದುಲ್ ರಶೀದ್ ಮಹಮ್ಮದ್ ಗೌಸ್ ಶೇಖ್ (65) ಅವರು ತಮ್ಮ ಆಟೋರಿಕ್ಷಾ (KA-30-A-5248) ಅನ್ನು ಶಿರವಾಡ ಕಡೆಯಿಂದ ಕಾರವಾರ ನಗರದತ್ತ ಚಲಾಯಿಸಿಕೊಂಡು ಬರುತ್ತಿದ್ದರು. ಬಾಂಡಿಶಿಟ್ಟಾದ ಡಿವೈನ್ ಕ್ರಾಸ್ ಚಾಪೆಲ್ ಚರ್ಚ್ ಸಮೀಪ ತಲುಪಿದ ವೇಳೆ, ಮುಂದೆ ಸಾಗುತ್ತಿದ್ದ ಬೈಕ್ ಅನ್ನು ಓವರ್‌ಟೇಕ್ ಮಾಡಲು ಚಾಲಕ ಯತ್ನಿಸಿದ್ದಾನೆ.

ಈ ವೇಳೆ ಆಟೋವನ್ನು ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಲಾಗಿದ್ದು, ಎದುರಿನಿಂದ ಕಾರವಾರದಿಂದ ಶಿರವಾಡ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದ ಬಲಭಾಗಕ್ಕೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಆಟೋದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಶಿರವಾಡ ನಿವಾಸಿ ಹರ್ಷ ಗಣಪತಿ ಗೌಡ (24) ಅವರಿಗೆ ಬಲಕಿವಿ ಮತ್ತು ತಲೆಗೆ ತೀವ್ರ ಗಾಯಗಳಾಗಿವೆ. ಶೇಜವಾಡ ನಿವಾಸಿ ಪದ್ಮಾ ಪರಶುರಾಮ ಭೋವಿವಡ್ಡರ (51) ಅವರಿಗೆ ಗದ್ದದ ಬಳಿ ಗಾಯವಾಗಿದೆ. ಮಕ್ಕೇರಿ–ಶೇಜವಾಡ ನಿವಾಸಿ ದೀಪಾಲಿ ಪ್ರಣಿತ ಶೆಜವಾಡಕರ (34) ಅವರಿಗೆ ತಲೆಗೆ ಪೆಟ್ಟಾಗಿದೆ. ಚಾಲಕ ಅಬ್ದುಲ್ ರಶೀದ್ ಅವರಿಗೂ ಕೈಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳು ದೀಪಾಲಿ ಶೆಜವಾಡಕರ ನೀಡಿದ ದೂರಿನ ಆಧಾರದ ಮೇಲೆ, ಆಟೋ ಚಾಲಕ ಅಬ್ದುಲ್ ರಶೀದ್ ವಿರುದ್ಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ನಿಖರ ಕಾರಣ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

Please Share: