ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಜಿಲ್ಲೆಯ ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆದಿದೆ ಎಂಬ ರಾಜಕೀಯ ಚರ್ಚೆಗೆ ಸ್ವತಃ ಶಾಸಕರೇ ತೆರೆ ಎಳೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಆಹ್ವಾನ ನೀಡಿದ ವಿಚಾರವನ್ನು ಅವರು ಬಹಿರಂಗಪಡಿಸಿದ್ದು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಂಕೋಲಾ ತಾಲೂಕಿನ ಮಂಜಗುಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಡಿಸಿಎಂ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. “ಜಿಲ್ಲೆಯಲ್ಲಿ ನೀವೊಬ್ಬರೇ ಬಿಜೆಪಿ ಶಾಸಕರಿದ್ದೀರಿ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ” ಎಂದು ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಕುಮಟಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ದಿನಕರ್ ಶೆಟ್ಟಿ, “ಸಿಎಂ ಜಿಲ್ಲೆಗೆ ಬಂದಾಗ ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆದರೆ ನಾನು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಬಿಜೆಪಿಯಲ್ಲೇ ಆರಾಮವಾಗಿದ್ದೇನೆ. ಒಬ್ಬನೇ ಶಾಸಕನಾಗಿ ಹೋರಾಡುವ ಶಕ್ತಿ ನನಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ, “ಈ ಹಿಂದೆ ಕೂಡ ಬೇರೆ ಪಕ್ಷದಿಂದ ಆಹ್ವಾನ ಬಂದಿತ್ತು. ಆದರೆ ಪಕ್ಷ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಕ್ಷೇತ್ರಕ್ಕೆ ಅನುದಾನ ಕಡಿಮೆ ಬಂದರೂ ಪರವಾಗಿಲ್ಲ, ನಾನು ಬಿಜೆಪಿ ತೊರೆಯುವುದಿಲ್ಲ” ಎಂದು ದಿನಕರ್ ಶೆಟ್ಟಿ ಪುನರುಚ್ಚರಿಸಿದರು.

ಈ ಹೇಳಿಕೆಯಿಂದ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಮತ್ತಷ್ಟು ಚೈತನ್ಯ ಸಿಕ್ಕಿದೆ.

 

Please Share: