ಕರಾವಳಿ ವಾಯ್ಸ್ ನ್ಯೂಸ್ 

ಗೋವಾ ರಾಜ್ಯದ ಕಾಣಕೋಣ ತಾಲೂಕಿನ ಪೋಲೆಂ ಕಡಲತೀರದಲ್ಲಿ ಸಮುದ್ರ ಅಲೆಗಳ ರಭಸಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಕರ್ನಾಟಕ ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಯ ಶವ ಎರಡು ದಿನಗಳ ಬಳಿಕ ರವಿವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತ ವಿದ್ಯಾರ್ಥಿ ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ, ಅಂಕೋಲಾ ತಾಲೂಕಿನ ಬೆಳಾಬಂದರ್ ಗ್ರಾಮದ ವಿಘ್ನೇಶ್ವರ ಪ್ರಕಾಶ ನಾಯ್ಕ (20) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಕರ್ನಾಟಕ-ಗೋವಾ ಗಡಿ ಭಾಗವಾದ ಪೋಲೆಂ ಕಡಲತೀರಕ್ಕೆ ಈಜಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ.

ಈಜುತ್ತಿದ್ದ ವೇಳೆ ಏಕಾಏಕಿ ಅಲೆಗಳ ಹೊಡೆತಕ್ಕೆ ಸಿಲುಕಿದ ವಿಘ್ನೇಶ್ವರ ಸಮುದ್ರದೊಳಗೆ ಕೊಚ್ಚಿ ಹೋಗಿದ್ದು, ಸ್ನೇಹಿತರು ಸಹಾಯಕ್ಕೆ ಕೂಗಿದರೂ ಕ್ಷಣಾರ್ಧದಲ್ಲೇ ಆತ ನಾಪತ್ತೆಯಾಗಿದ್ದ. ಘಟನೆ ತಿಳಿದ ತಕ್ಷಣ ಗೋವಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಆರಂಭಿಸಿದ್ದರು. ಹ್ಯಾಲಿಕಾಪ್ಟರ್ ಸಹಾಯದಿಂದ ಹಾಗೂ ಕರಾವಳಿ ರಕ್ಷಕ ಸಿಬ್ಬಂದಿ, ಮೀನುಗಾರರ ನೆರವಿನಿಂದ ಎರಡು ದಿನಗಳ ಕಾಲ ನಿರಂತರ ಹುಡುಕಾಟ ನಡೆಸಲಾಯಿತು.

ರವಿವಾರ ಬೆಳಿಗ್ಗೆ ಪೋಲೆಂ ಕಡಲತೀರದ ಸಮೀಪವೇ ಮೃತದೇಹ ಪತ್ತೆಯಾದ ಸುದ್ದಿ ಗ್ರಾಮಕ್ಕೆ ತಲುಪುತ್ತಿದ್ದಂತೆ ಬೆಳಾಬಂದರ್ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿತು. ಮನೆಯ ಏಕೈಕ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ರೋದನ ಕಣ್ಣೀರಾಗಿಸಿದೆ. ಕಾಲೇಜಿನ ಸಹಪಾಠಿಗಳು, ಉಪನ್ಯಾಸಕರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಮುದ್ರ ಅಲೆಗಳ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಯುವಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಒಂದೇ ಕ್ಷಣದ ಅಜಾಗರೂಕತೆ ಅಮೂಲ್ಯ ಜೀವವನ್ನು ಕಸಿದುಕೊಂಡಿರುವ ಈ ಘಟನೆ ಎಲ್ಲರ ಮನಸ್ಸನ್ನೂ ಮಿಡಿಯುವಂತೆ ಮಾಡಿದೆ.

Please Share: