ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ಕಠಿಣಕೋಣ ಪ್ರದೇಶದ ಮನೆಯೊಂದರ ಆವರಣದಲ್ಲಿ ಭಾನುವಾರ ಆರು ಹೆಬ್ಬಾವುಗಳು ಕಾಣಿಸಿಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವಿಜಯ ತಳೇಕರ ಅವರಿಗೆ ಸೇರಿದ ಮನೆಯ ಆವರಣದಲ್ಲಿ ಈ ಘಟನೆ ನಡೆದಿದ್ದು, ಕೆಲಕಾಲ ಗಾಬರಿಯ ವಾತಾವರಣ ನಿರ್ಮಾಣವಾಗಿತ್ತು.

Banner Ad

ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ನಿರ್ಮಾಣಕ್ಕಾಗಿ ದಾಸ್ತಾನಿಟ್ಟಿದ್ದ ಕಬ್ಬಿಣದ ಸಾಮಗ್ರಿಗಳ ನಡುವೆ ಹಾವುಗಳು ಚಲನವಲನ ಮಾಡುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಒಂದೆರಡು ಅಲ್ಲ, ಆರು ಹೆಬ್ಬಾವುಗಳು ಒಟ್ಟಾಗಿ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ದೊರಕುತ್ತಿದ್ದಂತೆಯೇ ಉರಗ ರಕ್ಷಣೆಯಲ್ಲಿ ಪರಿಣತಿ ಹೊಂದಿರುವ ಅರಣ್ಯ ಇಲಾಖೆಯ ಗಸ್ತು ವನಪಾಲಕ ಗೋಪಾಲ ನಾಯ್ಕ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಕಾಲ ಎಚ್ಚರಿಕೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ 8ರಿಂದ 12 ಅಡಿ ಉದ್ದದವರೆಗೆ ಇರುವ ಆರು ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಅವುಗಳನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಗೋಪಾಲ ನಾಯ್ಕ, ಬೇಸಿಗೆ ಆರಂಭವಾಗುತ್ತಿದ್ದಂತೆ ಹಾವುಗಳ ಮಿಲನಕ್ರಿಯೆ ಚುರುಕುಗೊಳ್ಳುತ್ತದೆ. ಹೆಣ್ಣು ಹಾವಿನ ಸುಗಂಧವನ್ನು ಅನುಸರಿಸಿ ಗಂಡು ಹಾವುಗಳು ಒಂದೇ ಸ್ಥಳಕ್ಕೆ ಸೇರುವುದು ಸಹಜ. ಹೀಗಾಗಿ, ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಅಸಾಮಾನ್ಯವಲ್ಲ ಎಂದು ವಿವರಿಸಿದರು. ಸಾರ್ವಜನಿಕರು ಭಯಪಡದೇ, ಇಂತಹ ಸಂದರ್ಭಗಳಲ್ಲಿ ಹಾವುಗಳನ್ನು ಹಾನಿಗೊಳಿಸದೇ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಘಟನೆ ತಿಳಿದ ಬಳಿಕ ಸುತ್ತಮುತ್ತಲಿನ ನಿವಾಸಿಗಳು ಮನೆ ಹೊರಗೆ ಗುಂಪುಗೂಡಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು. ಮಕ್ಕಳನ್ನು ಮನೆ ಒಳಗೇ ಇರಿಸುವಂತೆ ಹಿರಿಯರು ಸೂಚನೆ ನೀಡಿದರು. ಯಾವುದೇ ಅನಾಹುತ ಸಂಭವಿಸದಿರುವುದು ಸ್ಥಳೀಯರಿಗೆ ನೆಮ್ಮದಿಯನ್ನುಂಟು ಮಾಡಿದೆ.

ಬೇಸಿಗೆಯ ಹಿನ್ನೆಲೆಯಲ್ಲಿ ಮನೆಗಳ ಸುತ್ತಮುತ್ತ ಕಬ್ಬಿಣದ ಸಾಮಗ್ರಿ, ಮರದ ದಿಬ್ಬ, ಕಲ್ಲಿನ ರಾಶಿ ಮುಂತಾದವುಗಳನ್ನು ಅಸ್ತವ್ಯಸ್ತವಾಗಿ ಇಡದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಾವುಗಳು ಕಂಡುಬಂದರೆ ಸ್ವಯಂ ಪ್ರಯತ್ನಿಸದೇ ತಕ್ಷಣ ಅರಣ್ಯ ಇಲಾಖೆಯನ್ನು ಸಂಪರ್ಕಿಸುವುದು ಸುರಕ್ಷಿತ ಕ್ರಮ ಎಂದು ಅರಣ್ಯ ಇಲಾಖೆ ತಿಳಿಸಿದೆ.

 

ಹಾವುಗಳನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಜೇಶ ನಾಯ್ಕ ಹಸಕರಿಸಿದರು.

Please Share: