ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು: ಅಕ್ರಮ ಅದಿರು ರಪ್ತು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ED) ದಾಖಲಿಸಿದ್ದ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರಿಂದ ಸತೀಶ್ ಸೈಲ್‌ಗೆ ದೊಡ್ಡ ರಿಲೀಫ್ ದೊರೆತಂತಾಗಿದೆ.
ಶಾಸಕ ಸತೀಶ್ ಸೈಲ್ ಅವರು ಅಕ್ರಮ ಅದಿರು ರಪ್ತು ಪ್ರಕರಣದಲ್ಲಿ ಅನಾರೋಗ್ಯದ ಕಾರಣವನ್ನು ಮುಂದಿಟ್ಟು ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ, ವೈದ್ಯಕೀಯ ಆಧಾರಗಳನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
ಶಾಸಕ ಸತೀಶ್ ಸೈಲ್ ಅವರಿಗೆ ಲಿವರ್ ಸಂಬಂಧಿತ ಸಮಸ್ಯೆ ಇರುವುದರಿಂದ ನಿರಂತರ ಚಿಕಿತ್ಸೆ ಅಗತ್ಯವಾಗಿದ್ದು, ಈ ಹಿನ್ನೆಲೆ ವೈದ್ಯಕೀಯ ಕಾರಣಗಳ ಮೇರೆಗೆ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಜಾಮೀನು ಮಂಜೂರು ಮಾಡುವ ವೇಳೆ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿದ್ದು, ಐದು ಲಕ್ಷ ರೂ. ಮೌಲ್ಯದ ಬಾಂಡ್ ಹಾಗೂ ಒಬ್ಬ ಶ್ಯೂರಿಟಿಯನ್ನು ಒದಗಿಸುವಂತೆ ಸೂಚನೆ ನೀಡಿದೆ.
