ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಬೇರೆಯವನನ್ನು ಕೊಲೆ ಮಾಡಲು ಸಂಚು ರೂಪಿಸಿ, ತಪ್ಪಾಗಿ ತಮ್ಮ ಜೊತೆಯಲ್ಲಿದ್ದವನನ್ನೇ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವರ್ಷಗಳ ಬಳಿಕ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2019ರ ಏಪ್ರಿಲ್ 23ರಂದು ನಡೆದ ಈ ಪ್ರಕರಣದಲ್ಲಿ, ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರು ಆರೋಪಿಗಳಿಗೆ ತಲಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷೆಗೆ ಗುರಿಯಾದವರು SDPI ಕಾರ್ಯಕರ್ತರಾದ ಮಹ್ಮದ್ ಫಾರೂಕ್ ಪಟೇಲ್, ಮಹ್ಮದ್ ಸಲೀಂ ಸಾಗರ ಭಾಷ, ಸರ್ಫರಾಜ್ ಪಟೇಲ್, ಮಹ್ಮದ್ ಹಾರೀಪ್, ನಿಸಾರ್ ಶೇಖ್ ಹಾಗೂ ಮೌಸಿನ್ ಹೊನ್ನಾವರರಾಗಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅನೀಶ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದ ಆರೋಪಿಗಳು, ಕತ್ತಲಲ್ಲಿ ನಡೆದ ಗೊಂದಲದ ವೇಳೆ ತಪ್ಪಾಗಿ SDPI ಕಾರ್ಯಕರ್ತ ಅಸ್ಲಾಂ ಮೇಲೆ ಚಾಕು ಇರಿತ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಅಸ್ಲಾಂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಕೊಲೆ ನಡೆಸಿದ ಬಳಿಕ ಅನೀಶ್ ಹತ್ಯೆಯಾಗಿದೆ ಎಂಬ ಭ್ರಮೆಯಲ್ಲಿ ಆರೋಪಿಗಳು ರಾತ್ರೋರಾತ್ರಿ ಪರಾರಿಯಾಗಿದ್ದರು. ಆದರೆ ಬೆಳಿಗ್ಗೆ ಬೆಳಕು ಕಾಣುತ್ತಿದ್ದಂತೆ, ತಮ್ಮ ಜೊತೆಯಲ್ಲಿದ್ದವನದ್ದೇ ಕೊಲೆ ಆಗಿರುವುದು ಬೆಳಕಿಗೆ ಬಂದಿತ್ತು.

ಘಟನೆಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ನಂತರ ಇದೀಗ ನ್ಯಾಯಾಲಯ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದೆ.

 

 

Please Share: