ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲ್ಲೂಕಿನ ದೇವರಹಕ್ಕಲದ ಪೈರಗದ್ದೆ ಪ್ರದೇಶದಲ್ಲಿ ಜಾಗದ ವಿವಾದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಮೇಲೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಸ್ಥಳೀಯರ ಆರೋಪದಂತೆ, ಜಾಗದ ವಿಷಯಕ್ಕೆ ಸಂಬಂಧಿಸಿ ದೀರ್ಘಕಾಲದಿಂದ ದ್ವೇಷ ಮತ್ತು ಕಿರುಕುಳ ನೀಡುತ್ತಿದ್ದ ಜಫರ್ ಅಲಿ ಆದಮ್ ಸಾಬ್ (೪೫) ಹಾಗೂ ಅವರ ಪುತ್ರ ಮಹ್ಮದ್ ಹಸನ್ ಪೈಜಾನ್ ಸಾಬ್ (೨೦) ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕುಮಟಾ ಪೊಲೀಸರು ಇಬ್ಬರನ್ನೂ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮನೆ ಮಾಲೀಕರಾದ ದಿನಕರ ನಾಗಪ್ಪ ಕುಮಟಾಕರ್ ಮತ್ತು ಸುರೇಖಾ ದಿನಕರ ಕುಮಟಾಕರ್ ಅವರು, “ಜಾಗದ ವಿಷಯಕ್ಕೆ ಕ್ಯಾತೆ ತೆಗೆಯುತ್ತಿದ್ದ ಜಫರ್ ಅಲಿಯಿಂದಲೇ ಈ ಕೃತ್ಯ ನಡೆದಿದೆ. ನಿತ್ಯ ಕಿರುಕುಳ ನೀಡುತ್ತಿದ್ದರು” ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದ್ದು, ಅದರ ಪರಿಹಾರವನ್ನು ಆರೋಪಿಗಳಿಂದ ಭರಿಸಲು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರು, “ಅಪರಾಧಕ್ಕೆ ಧರ್ಮಕ್ಕೆ ಸಂಬಂಧ ಇಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಹಿಂದೂ–ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಶಿರಫ್, ಹಸೀನಾ, ಸುರೇಖಾ ಸೇರಿದಂತೆ ಹಲವರು ದಿನಕರ ನಾಗಪ್ಪ ಕುಮಟಾಕರ್ ಅವರ ಪರವಾಗಿ ನಿಂತು ಬೆಂಬಲ ವ್ಯಕ್ತಪಡಿಸಿದ್ದು, “ಒಗ್ಗಟ್ಟಾಗಿ ಬದುಕುತ್ತಿದ್ದ ನಮ್ಮ ನಡುವೆ ದ್ವೇಷದ ಬೀಜ ಬಿತ್ತುವವರ ವಿರುದ್ಧ ಕಾನೂನು ಕ್ರಮ ಅಗತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.
