ಕರಾವಳಿ ವಾಯ್ಸ್ ನ್ಯೂಸ್

ದಾಂಡೇಲಿ: ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾಲಮಡ್ಡಿ ಪ್ರದೇಶದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಸ್ಥಳೀಯ ಕಾಳಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಕಾಳಿ ನದಿಯಲ್ಲಿ ವ್ಯಾಪಕ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ಹಾಲಮಡ್ಡಿ ನಿವಾಸಿ, 54 ವರ್ಷ ವಯಸ್ಸಿನ ಶಂಕರ ಲಕ್ಷ್ಮಣ ನಾಯ್ಕ ಅವರು ಡಿ.26 ರಿಂದ ಕಾಣೆಯಾಗಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರು ನಡೆಸಿದ ಹುಡುಕಾಟ ವಿಫಲವಾದ ಹಿನ್ನೆಲೆಯಲ್ಲಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಶಂಕರ ಅವರು ಕಾಳಿ ನದಿಗೆ ಬಿದ್ದಿರಬಹುದೆಂಬ ಅನುಮಾನ ವ್ಯಕ್ತವಾದ ಹಿನ್ನೆಲೆ, ನದಿಯಲ್ಲಿ ಶೋಧ ಕಾರ್ಯಕ್ಕೆ ಮುಂದಾಗಲಾಗಿದೆ.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಸಂತ್ರಾಮ ಕಾಂಬಳೆ ಹಾಗೂ ಹವಲ್ದಾರ್ ಮಹೇಶ ಗಾವಡೆ ನೇತೃತ್ವದ ಪೊಲೀಸ್ ತಂಡ, ಜೋಯಿಡಾ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ತೆಪ್ಪದ ಮೂಲಕ ಕಾಳಿ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

ನದಿಯ ವಿವಿಧ ಭಾಗಗಳಲ್ಲಿ ಬೆಳಗ್ಗೆಯಿಂದಲೇ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಸೋಮವಾರ ಮಧ್ಯಾಹ್ನದವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಶೋಧ ಕಾರ್ಯವನ್ನು ನಿರಂತರವಾಗಿ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆಗೆ ಸ್ಥಳೀಯರ ಸಹಕಾರವೂ ಮಹತ್ವದ ಪಾತ್ರ ವಹಿಸಿದೆ. ಕೋಗಿಲಬನ/ಬಡಕಾನಶಿರಡಾ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ನಾಯ್ಕ, ಆಲೂರು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ ಬೋವಿವಡ್ಡರ, ಯುವ ಪ್ರವಾಸೋದ್ಯಮ ಕಾರ್ಯಕರ್ತ ಮಂಜು ಪಂತೋಜಿ, ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್ ಕೊಠಾರಿ ಸೇರಿದಂತೆ ಹಲವಾರು ಸ್ಥಳೀಯರು ಸ್ಥಳದಲ್ಲಿದ್ದು, ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮುಂದಿನ ತನಿಖೆ ಮುಂದುವರಿಸಿದ್ದು, ಶೋಧ ಕಾರ್ಯದ ಪ್ರಗತಿಯ ಬಗ್ಗೆ ನಿರಂತರವಾಗಿ ಮಾಹಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಶಂಕರ ನಾಯ್ಕ ಅವರ ಪತ್ತೆಯಾಗುವ ನಿರೀಕ್ಷೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

 

Please Share: