ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ಕಾಳಿಹುಲಿ ಸಂರಕ್ಷಿತ ಅರಣ್ಯದಲ್ಲಿ ಬುಧವಾರ ಮಧ್ಯಾಹ್ನ ನಡೆದ ಘಟನೆ ಎಲ್ಲರ ಮನದೊಳಗೂ ಚಕಿತ ಮೂಡಿಸಿದೆ. ಕ್ಯಾಸಲರಾಕ್ನ ಹೆಸ್ಕಾಂ ಸಿಬ್ಬಂದಿ ಭುಜಂಗ ದುರ್ಗಪ್ಪ ಗುಂಜೇಕರ (46) ಅವರ ಮೃತದೇಹ ಮರಕ್ಕೆ ನೇಣುಬಿಗಿದು ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅನಮೋಡ ಹೆಸ್ಕಾಂ ಕಚೇರಿಯಲ್ಲಿ ಪವರ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುಂಜೇಕರ, ನವೆಂಬರ್ 10ರಂದು “ರಾಮನಗರಕ್ಕೆ ಸಹೋದರಿಯ ಮನೆಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮನೆಯಿಂದ ಹೊರಟವರು ಮರಳಿ ಮನೆ ತಲುಪಿರಲಿಲ್ಲ. ಮೊಬೈಲ್ ರಿಂಗಣಿಸುತ್ತಿದ್ದರೂ ಸಂಪರ್ಕ ಸಾಧ್ಯವಾಗದ ಕಾರಣ ಪತ್ನಿ ಮಂಗಳಾ ಅವರು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅರಣ್ಯದ ಕುಣಗಿನಿ ಪ್ರದೇಶದಲ್ಲಿ ಪತ್ತೆಯಾದ ಶವ ಆತ್ಮಹತ್ಯೆಯ ಸಂಶಯ ಹುಟ್ಟಿಸಿದರೂ, ಅದರ ಹಿನ್ನೆಲೆ ಇನ್ನೂ ರಹಸ್ಯವೇ ಆಗಿದೆ. ಸ್ಥಳಕ್ಕೆ ಧಾವಿಸಿದ ರಾಮನಗರ ಪೊಲೀಸರು ಘಟನೆ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಘಟನೆ ಜೋಯಿಡಾ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ; ಆದರೆ ಅರಣ್ಯ ಪ್ರದೇಶದ ಮಧ್ಯದಲ್ಲಿ ನಡೆದಿರುವ ಈ ರಹಸ್ಯಮಯ ಸಾವು ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ.


