ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೇವಲ 9 ದಿನಗಳಲ್ಲಿ ₹2.60 ಲಕ್ಷ ಮೌಲ್ಯದ ಬಂಗಾರದ ಕರಿಮಣಿ ಸರವನ್ನು ಪತ್ತೆಹಚ್ಚುವ ಮೂಲಕ ಕುಮಟಾ ಕ್ರೈಂ ಬ್ರ್ಯಾಂಚ್ ಪೊಲೀಸರು ಗಮನಾರ್ಹ ಕಾರ್ಯಾಚರಣೆ ನಡೆಸಿದ್ದಾರೆ.

ಆ.18ರಂದು ಮಧ್ಯಾಹ್ನ ಕುಮಟಾ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ಚಿಕ್ಕೊಳ್ಳಿ ನಿವಾಸಿ ಭಾರತಿ ಶಿವು ನಾಯ್ಕ (59) ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಪರ್ಸ್ ಕಳವಾಗಿತ್ತು. ಪರ್ಸ್ನಲ್ಲಿ ಸುಮಾರು 16 ಗ್ರಾಂ ತೂಕದ ಮಾಂಗಲ್ಯ ಸರವಿತ್ತು. ಈ ಕುರಿತು ಆ.19ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಕುಮಟಾ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಅಳವಡಿಸಲಾಗಿದ್ದ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳ ಚಲನವಲನದ ಬಗ್ಗೆ ಸುಳಿವು ಸಂಗ್ರಹಿಸಿದರು.
ನಿರಂತರ ತನಿಖೆಯ ಫಲವಾಗಿ ಆ.28ರಂದು, ಪ್ರಕರಣ ದಾಖಲಾದ 9 ದಿನಗಳಲ್ಲೇ ಕುಮಟಾ ತಾಲೂಕಿನ ಬಡಾಳ–ಸೊಪ್ಪಿನಹೊಸಳ್ಳಿ ಭಾಗದಲ್ಲಿ ಸೀಮಾಬಾನು ಕೋಂ ಜಾವಿದ್ ಸಾಬ (42) ಹಾಗೂ ಶಮ್ಮಾ ಬುಡಿಯಾ ಕೋಂ ಮೊಹಮ್ಮದ್ ಫಿರ್ದೋಸ್ (27) ಅವರನ್ನು ವಶಕ್ಕೆ ಪಡೆಯಲಾಯಿತು.
ವಿಚಾರಣೆ ವೇಳೆ ಆರೋಪಿಗಳಿಂದ 20.180 ಗ್ರಾಂ ತೂಕದ, ಅಂದಾಜು ₹2.60 ಲಕ್ಷ ಮೌಲ್ಯದ ಬಂಗಾರದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ., ಪಿಎಸ್ಐ ಸಾವಿತ್ರಿ ನಾಯ್ಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಮತ್ತು ಗುರು ನಾಯ್ಕ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್ಪಿ ಬಿ. ಗಿರೀಶ್ ಅವರು ಕುಮಟಾ ಪೊಲೀಸರನ್ನು ಅಭಿನಂದಿಸಿದ್ದಾರೆ.
100ಕ್ಕೂ ಹೆಚ್ಚು ಸಿಸಿಟಿವಿ | 9 ದಿನಗಳ ತನಿಖೆ | ₹2.60 ಲಕ್ಷದ ಚಿನ್ನ ಪತ್ತೆ — ಕುಮಟಾ ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.


