ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಮೀನುಗಾರಿಕೆಗೆ ತೆರಳಿದ್ದಾಗ ಮೀನು ಚುಚ್ಚಿದ ಗಾಯದಿಂದ ಯುವಕ ಸಾವನ್ನಪ್ಪಿದ ಘಟನೆ ತಾಲೂಕಿನ ಮಾಜಾಳಿ ದಾಂಡೇಭಾಗದಲ್ಲಿ ಆತಂಕ ಮೂಡಿಸಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಆರೋಪ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.

ಮೃತ ಯುವಕನನ್ನು ಅಕ್ಷಯ ಅನಿಲ ಮಾಜಾಳಿಕರ್ (24) ಎಂದು ಗುರುತಿಸಲಾಗಿದೆ. ಅಕ್ಟೋಬರ್ 14 ರಂದು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಅಕ್ಷಯನ ಹೊಟ್ಟೆಗೆ ನೀರಿನಿಂದ ಜಿಗಿದ 8–10 ಇಂಚು ಉದ್ದದ ಮೀನು ಚುಚ್ಚಿ ಗಂಭೀರ ಗಾಯ ಉಂಟಾಗಿತ್ತು.

ತಕ್ಷಣ ಕ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಕ್ಷಯನಿಗೆ ಹೊಲಿಗೆ ಹಾಕಿ ವೈದ್ಯರು ಚಿಕಿತ್ಸೆ ನೀಡಿದ್ದರೂ, ಎರಡು ದಿನಗಳ ನಂತರ ನೋವು ಕಡಿಮೆಯಾಗದೇ ಮತ್ತೆ ಆಸ್ಪತ್ರೆಗೆ ಮರಳಿದ್ದಾನೆ. ಆದರೆ ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಮೀನಿನ ಮೂತಿ ಹೊಟ್ಟೆಯ ಕರುಳವರೆಗೆ ಹೋಗಿ ಒಳಗಾಯ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕುಟುಂಬ ಸದಸ್ಯರ ಪ್ರಕಾರ, ವೈದ್ಯರ ನಿರ್ಲಕ್ಷ್ಯವೇ ಅಕ್ಷಯನ ಸಾವಿಗೆ ಕಾರಣ ಎಂದು ಆರೋಪ ಹೊರಿಸಿದ್ದು, ಆಸ್ಪತ್ರೆ ಆವರಣದಲ್ಲೇ ಸಂಬಂಧಿಕರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಈ ಅಕಾಲಿಕ ಸಾವಿನಿಂದ ಮಾಜಾಳಿ ಪ್ರದೇಶದಲ್ಲಿ ಶೋಕದ ಅಲೆ ಹರಿದಿದೆ.

 

Please Share: