ಕರಾವಳಿ ವಾಯ್ಸ್ ನ್ಯೂಸ್
ಸಿದ್ದಾಪುರ: ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಳ ಹಾಗೂ ನಾಯ್ಕಾರ್ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಮರಗಳಿಗೆ ಮತ್ತು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಸ್ಥಳೀಯರಿಗೆ ತಿಳಿಯದಂತೆ ಮಾರ್ಕಿಂಗ್ ಮಾಡಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಯಾವ ಸಮಯದಲ್ಲಿ, ಯಾರು ಬಂದು ಈ ಮಾರ್ಕಿಂಗ್ ಮಾಡಿದ್ದಾರೆ ಎಂಬುದರ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡದೆ ಈ ರೀತಿ ಗುರುತು ಹಾಕಿರುವುದು ಅನುಮಾನ ಮತ್ತು ಆತಂಕ ಹೆಚ್ಚುವಂತೆ ಮಾಡಿದೆ.
ಇತ್ತೀಚೆಗೆ ತಾಲೂಕಿನಲ್ಲಿ ಚರ್ಚೆಯಾಗುತ್ತಿರುವ ಅಘನಾಶಿನಿ ನದಿ ತಿರುವು ಯೋಜನೆಯ ಭಾಗವಾಗಿ, ಕಲ್ಲಾಳ ಗ್ರಾಮದ ಇಳಿಮನೆ ಹೊಳೆಗೆ ಚಿಕ್ಕ ಡ್ಯಾಮ್ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರ್ಕಿಂಗ್ ಮಾಡಿರುವುದೇ ಎಂಬ ಅನುಮಾನ ಜನರಲ್ಲಿ ಮೂಡಿದೆ.
ಯೋಜನೆಯ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ, ಅರಣ್ಯ ನಾಶ, ಜಮೀನು ಕಳೆದುಕೊಳ್ಳುವ ಭೀತಿ ಹಾಗೂ ಗ್ರಾಮಗಳ ಭವಿಷ್ಯದ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
