ಕಾರವಾರ: ಅಂಕೋಲಾ–ಕಾರವಾರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಾತ್ರಿ ವೇಳೆ ಜಾನುವಾರುಗಳು ಮಲಗಿ ಅಪಘಾತಗಳಿಗೆ ಕಾರಣವಾಗುತ್ತಿರುವ ಘಟನೆ ಸಭೆಯ ಚರ್ಚೆಗೆ ಬಂದಾಗ ಕೆಲಕಾಲ ನಗೆಗಡಲಲಿ ತೇಲಿಸುವ ವಾತಾವರಣ ನಿರ್ಮಾಣವಾಯಿತು.
ದಿಶಾ ಸಮಿತಿಯ ಸದಸ್ಯರೊಬ್ಬರು, “ಹೆದ್ದಾರಿ ಪ್ರಾಧಿಕಾರದವರು ಜಾನುವಾರುಗಳನ್ನು ಓಡಿಸುವುದಕ್ಕೆ ಆಗುತ್ತಾ?” ಎಂದು ಪ್ರಶ್ನೆ ಎತ್ತಿದಾಗ ಸಭಾಂಗಣದಲ್ಲಿ ನಗೆಯ ವಾತಾವರಣ ಕಂಡುಬಂತು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ಹಾಗಲ್ಲ ಮಾಡುವುದಕ್ಕೆ ಆಗಲ್ಲ… ಯಾರ್ರೀ ನಿಮ್ಮ ಕಡೆ ದನ ಕಾಯೋರು ಯಾರ್ ಇದಾರೆ!” ಎಂದು ಎನ್‌ಎಚ್‌ಎಐ ಅಧಿಕಾರಿಗಳಿಗೆ ಹಾಸ್ಯ ಮಿಶ್ರಿತವಾಗಿ ಪ್ರತಿಕ್ರಿಯಿಸಿದರು.
ಆದರೆ ಗಂಭೀರವಾಗಿ ಮಾತು ಮುಂದುವರಿಸಿದ ಅವರು, ಜಾನುವಾರು ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ವೈಜ್ಞಾನಿಕ ಹಂಪ್ ನಿರ್ಮಾಣ ಮತ್ತು ಬಿಡಾಡಿ ದನಗಳಿಗೆ ರೇಡಿಯಂ ಕಾಲರ್ ಬಳಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ ಅವರು ಕೂಡಾ ಈ ಸಂಬಂಧ ಅಧಿಕಾರಿಗಳಿಗೆ ಸಭೆ ನಡೆಸಿ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಕಾಗೇರಿ ಒತ್ತಿ ಹೇಳಿದ್ದು, “ಜಾನುವಾರು ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ” ಎಂದರು.


