ಕರಾವಳಿ ವಾಯ್ಸ್ ನ್ಯೂಸ್
ರಾಮನಗರ-ಖಾನಾಪುರ: ರಾಮನಗರ ಖಾನಾಪುರ ಗಡಿಯಲ್ಲಿ ನಡೆದ ಆಘಾತಕಾರಿ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಭತ್ತದ ಹೊಲದಲ್ಲಿ ರವಿವಾರ ಬೆಳಿಗ್ಗೆ ಎರಡು ಆನೆಗಳು ಒಂದೇ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಆನೆ–ಮಾನವ ಸಂಘರ್ಷದ ಮತ್ತೊಂದು ಬೇಜಾರು ಉದಾಹರಣೆಯಾಗಿದೆ.
ಮಾಹಿತಿ ಪ್ರಕಾರ ಖಾನಾಪುರ ತಾಲ್ಲೂಕಿನ ಸುಲೇಗಾಳಿ ಗ್ರಾಮದ ರೈತ ಗಣಪತಿ ಗುರವ ತಮ್ಮ ಹೊಲದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಸೌರ ಬೇಲಿ ಅಳವಡಿಸಿದ್ದರು. ಆದರೆ ಬೆಳಗಿನ ವೇಳೆಗೆ ಹೆಸ್ಕಾಂ ವಿದ್ಯುತ್ ತಂತಿ ಮುರಿದು ಬೇಲಿಗೆ ತಗುಲಿ ವಿದ್ಯುತ್ ಹರಿದುಕೊಂಡು ಹೋಗಿದ್ದಾಗ, ಅದೇ ಸಮಯದಲ್ಲಿ ಆಹಾರದ ಹುಡುಕಾಟದಲ್ಲಿ ಬಂದ ಎರಡು ಆನೆಗಳು ಬೇಲಿಯನ್ನು ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಆಘಾತಕಾರಿ ದೃಶ್ಯ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೆಲವೇ ನಿಮಿಷಗಳಲ್ಲಿ ಸುದ್ದಿ ಗಡಿ ಗ್ರಾಮಗಳವರೆಗೆ ಹರಡಿತು. ಘಟನೆ ಕುರಿತು ಮಾಹಿತಿ ಪಡೆದ ಖಾನಾಪುರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಆದರೆ ಘಟನೆಯ ನಿಜಾಂಶದ ಬಗ್ಗೆ ವಿವಾದ ಹುಟ್ಟಿದೆ. ಹೆಸ್ಕಾಂ ಅಧಿಕಾರಿಗಳ ಪ್ರಕಾರ, “ವಿದ್ಯುತ್ ತಂತಿ ಮುರಿದುಹೋಗಿಲ್ಲ. ರೈತನ ಗುಡಿಸಲಿನ ಸಂಪರ್ಕದಿಂದಲೇ ವಿದ್ಯುತ್ ಶಾಕ್ ಹರಿದಿರಬಹುದು,” ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಸ್ಥಳೀಯರು, “ಸೌರ ಬೇಲಿಯ ಮೇಲೆ ತಂತಿ ಬಿದ್ದಿದ್ದನ್ನು ನಾವು ಸ್ವತಃ ನೋಡಿದ್ದೇವೆ,” ಎಂದು ಹೇಳುತ್ತಿದ್ದಾರೆ.
ಇದರಿಂದಾಗಿ ಆನೆಗಳ ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅರಣ್ಯ ಇಲಾಖೆ ತನಿಖೆ ಮುಂದುವರೆಸಿದ್ದು, ನಿಜಕ್ಕೂ ಆನೆಗಳು ಸೌರ ಬೇಲಿಯಿಂದಲೇ ಸತ್ತವೋ ಅಥವಾ ಬೇರೆ ವಿದ್ಯುತ್ ಸಂಪರ್ಕದಿಂದಲೋ? ಎಂಬ ಪ್ರಶ್ನೆ ಈಗ ಎಲ್ಲರ ಬಾಯಲ್ಲಿದೆ.


