ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ತಾಲೂಕಿನ ವಡ್ಡಿ ಘಾಟ್ ತೀರುವಿನಲ್ಲಿ ಶನಿವಾರ ಸಂಜೆ ನಡೆದ ಘಟನೆ ಎಲ್ಲರಿಗೂ ನಡುಕ ಹುಟ್ಟಿಸಿದೆ! ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಒಂದೇ ಅಪಘಾತದಲ್ಲಿ ಮೂರು ಪಲ್ಟಿ ಹೊಡೆದು ಕಂದಕಕ್ಕೆ ಉರುಳಿದರೂ, ಬಸ್ಸಿನಲ್ಲಿದ್ದ 49 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಅದೃಷ್ಟದ ಕತೆ ಇದೀಗ ಮಾತಿನ ಮಾಲೆಯಾಗಿದೆ.

ಕಾಮಗಾರಿಯ ನಿಮಿತ್ತ ಕುಮಟಾ–ಶಿರಸಿ ರಸ್ತೆ ಬಂದ್ ಮಾಡಲಾಗಿದ್ದರಿಂದ ಬಸ್ಸು ವಡ್ಡಿ ಮಾರ್ಗದಿಂದ ತೆರಳುತ್ತಿತ್ತು. ಈ ಮಾರ್ಗದ ಘಾಟ್ ಭಾಗದಲ್ಲಿ ತೀವ್ರ ತಿರುವುಗಳನ್ನು ಹಾದು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿದೆ.

ಅಪಘಾತದ ವೇಳೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಮೇಲಕ್ಕೆತ್ತಿ ಖಾಸಗಿ ವಾಹನಗಳಲ್ಲಿ ಅಂಕೋಲಾ ಹಾಗೂ ಕುಮಟಾ ಆಸ್ಪತ್ರೆಗೆ ಕಳುಹಿಸಿದರು. ಅದೃಷ್ಟವಶಾತ್ ಯಾರಿಗೂ ಜೀವಾಪಾಯವಾಗಿಲ್ಲ.

ಬಳ್ಳಾರಿಯಿಂದ ಕುಮಟಾ ಕಡೆಗೆ ಹೊರಟಿದ್ದ ಈ ಬಸ್ ಕುಮಟಾ ಘಟಕಕ್ಕೆ ಸೇರಿದ್ದು, ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಡ್ಡಿಘಾಟ್ ತಿರುವುಗಳು ಅಪಾಯಕಾರಿ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ರಸ್ತೆ ಅಗಲಿಸುವಿಕೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಅಧಿಕಾರಿಗಳ ಗಮನ ಸೆಳೆದಿದ್ದಾರೆ.

 

 

Please Share: