ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡದಲ್ಲಿ ಅಬ್ಬರದ ಗಾಳಿ ಮಳೆ ಮುಂದುವರಿದಿದ್ದು, ಕಾರವಾರದಲ್ಲಿ “ಮರದ ಕಂಟಕ” ಮತ್ತೆ ತಲೆದೋರಿದೆ. ಶುಕ್ರವಾರ ಮಧ್ಯಾಹ್ನ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರ ಬಿಣಗಾದ ಕದಂಬ ನೌಕಾನೆಲೆಯ ಗೇಟ್ ಬಳಿ ಬೃಹದಾಕಾರದ ಹಳೆಯ ಮಾವಿನ ಮರ ಉರುಳಿ ಬಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ.
ಘಟನೆಯಲ್ಲಿ ಎಂಟು ಬೈಕ್‌ಗಳು ಜಖಂ ಆಗಿದ್ದು, ಒಂದು ಆಕಳು ಸಾವನ್ನಪ್ಪಿದೆ. ಅದೃಷ್ಟವಶಾತ್, ಮರ ಉರುಳಿದ ಸಮಯದಲ್ಲಿ ಜನರು ಮರದ ಕೆಳಗಿರದ ಕಾರಣ ಪ್ರಾಣಾಪಾಯ ತಪ್ಪಿದೆ. ಸಾಮಾನ್ಯವಾಗಿ ನೌಕಾನೆಲೆಗೆ ತೆರಳುವವರು ತಮ್ಮ ಬೈಕ್‌ಗಳನ್ನು ಆ ಮರದ ಕೆಳಗೆ ನಿಲ್ಲಿಸುತ್ತಿದ್ದರು.
ಹಳೆಯ ಮಾವಿನ ಮರದ ಬೃಹತ್ ಕೊಂಬೆ ಬಿರುಸಿನ ಗಾಳಿಗೆ ತಟ್ಟಳಿಯದೇ ತುಂಡಾಗಿ ಬಿದ್ದು ವಾಹನಗಳ ಮೇಲೆ ಅಪ್ಪಳಿಸಿದೆ. ಸ್ಥಳಕ್ಕೆ ನಗರಸಭೆ ಸಿಬ್ಬಂದಿಗಳು, ನೌಕಾ ನೆಲೆಯ ನೇವಿ ಸಿಬ್ಬಂದಿಗಳು, ಪೊಲೀಸ್ ಹಾಗೂ ಐಆರ್‌ಬಿ ಸಿಬ್ಬಂದಿಗಳು ಧಾವಿಸಿ ಮರ ತೆರವು ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಕಾರವಾರದಲ್ಲಿ ಈ ಮರದ ಕಂಟಕ ಹೊಸದೇನಲ್ಲ — ಕಳೆದ ಮಳೆಗಾಲದಲ್ಲೂ ನಗರದಲ್ಲಿ ಮರ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಹಲವೆಡೆ ದ್ವಿಚಕ್ರ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆಗಾಲ ಆರಂಭವಾದಾಗಲೆಲ್ಲ ಹಳೆಯ ಮರಗಳು ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸುತ್ತಿದ್ದು, ನಾಗರಿಕರು ನಗರಸಭೆಯು ಮುಂಚಿತ ಕ್ರಮ ಕೈಗೊಂಡು ಅಪಾಯದ ಮರಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.


