ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ತಾಲೂಕಿನ ಶರಾವತಿ ಸೇತುವೆಯ ಮೇಲೆ ಬುಧವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಟ್ಯಾಂಕರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತರನ್ನು ಗುಂಡಬಾಳ ಮುಟ್ಟದ ಜಾನ್ ಲೂಯಿಸ್ (61) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಮೀನು ವ್ಯಾಪಾರಿಯಾಗಿದ್ದು, ಎಂದಿನಂತೆ ಮೀನು ಖರೀದಿಗಾಗಿ ಕಾಸರಕೋಡ್‌ಗೆ ತೆರಳಿ, ಮೀನು ಖರೀದಿಸಿ ಹೊನ್ನಾವರದ ಕಡೆಗೆ ಬೈಕ್‌ನಲ್ಲಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗ್ಯಾಸ್ ತುಂಬಿಕೊಂಡು ಮಂಗಳೂರಿನಿಂದ ಗುಲಬರ್ಗಾ ಕಡೆಗೆ ತೆರಳುತ್ತಿದ್ದ ಟ್ಯಾಂಕರ್‌ನ್ನು ಬೈಕ್ ಸವಾರ ಓವರ್‌ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಎದುರಿನಿಂದ ಹೊನ್ನಾವರದಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಇಕೋ ಕಾರು ಕಂಡು ಗಾಬರಿಗೊಂಡ ಬೈಕ್ ಸವಾರ ತನ್ನನ್ನು ರಕ್ಷಿಸಿಕೊಳ್ಳಲು ಎಡಬದಿಗೆ ಬೈಕ್ ತಿರುಗಿಸಿದ್ದಾನೆ. ಪರಿಣಾಮ ಟ್ಯಾಂಕರ್‌ನ ಹಿಂಬದಿಯ ಚಕ್ರಕ್ಕೆ ಕಾಲು ಸಿಲುಕಿ ರಸ್ತೆಗೆ ಬಿದ್ದಿದ್ದು, ಟ್ಯಾಂಕರ್ ಹರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನೆಯ ಕುರಿತು ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೃತ ಬೈಕ್ ಸವಾರನ ನಿರ್ಲಕ್ಷ ಹಾಗೂ ಓವರ್‌ಟೇಕ್ ಮಾಡುವ ಯತ್ನವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

 

Please Share: