ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಪ್ಯಾರಡೈಸ್ ಕಡಲ ತೀರದಿಂದ ಸ್ವಲ್ಪ ದೂರದ ಕಡಲಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದ ಪ್ರವಾಸಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಮೃತ ಮಹಿಳೆಗೆ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಮೃತರನ್ನು ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ನಿವಾಸಿ ನಾಗರತಿನಮ್ (58) ಎಂದು ಗುರುತಿಸಲಾಗಿದೆ. ಅವರು ಕುಟುಂಬ ಸಮೇತರಾಗಿ ಐದು ಜನರೊಂದಿಗೆ ಪ್ರವಾಸಕ್ಕೆ ಗೋಕರ್ಣಕ್ಕೆ ಆಗಮಿಸಿದ್ದರು. ಪ್ರವಾಸದ ಭಾಗವಾಗಿ ಪ್ಯಾರಡೈಸ್ ಕಡಲ ತೀರದ ಬಳಿ ದೋಣಿ ವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ದೋಣಿ ವಿಹಾರ ನಡೆಯುತ್ತಿದ್ದ ಸಂದರ್ಭದಲ್ಲೇ ನಾಗರತಿನಮ್ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಕೂಡಲೇ ಅವರನ್ನು ಖಾಸಗಿ ಅಂಬುಲೆನ್ಸ್ ಮೂಲಕ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆಯ ಪಿಎಸ್ಐ ಶಶಿಧರ್ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
