ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಕೈಗಾ ಕಾಡಿನ ಬಳಿ ಹಗಲಿನ ವೇಳೆಯೇ ಹುಲಿ ಅಟ್ಟಹಾಸ ಮೆರೆದ ಘಟನೆ ಆತಂಕ ಮೂಡಿಸಿದೆ. ಅಂಕೋಲಾದ ಕರಿಕಲ್ ಗ್ರಾಮದ ನಾರಾಯಣ ಹೆಗಡೆ ಮತ್ತು ಅವರ ಪತ್ನಿ ಗೀತಾ ಹೆಗಡೆ ಅವರು ಕಾರಿನಲ್ಲಿ ಕೈಗಾದ ಕೃಷಿಭೂಮಿಗೆ ತೆರಳುತ್ತಿದ್ದ ವೇಳೆ ಹುಲಿ ಎದುರಾದ ಘಟನೆಯು ರೋಮಾಂಚನ ಮೂಡಿಸಿದೆ.
ಅಕ್ಟೋಬರ್ 16ರಂದು ಬೆಳಗ್ಗೆ 11.45ರಿಂದ ಮಧ್ಯಾಹ್ನ 12.20ರವರೆಗೆ ಹುಲಿ ಕೈಗಾ–ಕಾರವಾರ ರಸ್ತೆಯ ಹರ್ಟುಗಾ ಬಳಿ ಸಂಚರಿಸುತ್ತಿತ್ತು. ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆ ಭಾಗವನ್ನು ಹುಲಿ ತನ್ನದಾಗಿಸಿಕೊಂಡು ನಡೆದು, ನಾರಾಯಣ ಹೆಗಡೆ ಅವರ ಕಾರನ್ನು ಅಟ್ಟಗಟ್ಟಿದಂತೆಯೇ ಮುಂದೆ ಸಾಗಿತು. ಕಾರಿನಿಂದ ಹಾರ್ನ ಹೊಡೆದರೂ ಹುಲಿ ಹಿಂದಿರುಗದೆ ಕಾರಿನತ್ತ ತಿರುಗಿ ಗುರ್‌ಗುರ್ ಎಂದದ್ದು ಸಾಹಸ ದೃಶ್ಯವಾಯಿತು!
“ರಾತ್ರಿ ವೇಳೆ ಹುಲಿ ದರ್ಶನ ಸಾಮಾನ್ಯ, ಆದರೆ ಹಗಲಿನಲ್ಲಿ ಇಷ್ಟು ಸಮಯ ರಸ್ತೆಯ ಮೇಲೆಯೇ ಸಂಚರಿಸುವುದು ಇದೇ ಮೊದಲ ಬಾರಿಗೆ,” ಎಂದು ನಾರಾಯಣ ಹೆಗಡೆ ಹೇಳಿದ್ದಾರೆ.
ಈ ಮಾರ್ಗದಲ್ಲಿ ಕಳೆದ ಮೂರು ವರ್ಷಗಳಿಂದ ಪದೇಪದೇ ಹುಲಿ ದರ್ಶನವಾಗುತ್ತಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಸಂಚರಿಸಲು ಅರಣ್ಯ ಇಲಾಖೆ ಸೂಚನೆ ನೀಡಿದೆ.


