ಕಾರವಾರ: ಜಿಲ್ಲೆಯ ಕೈಗಾ ಅಣುವಿದ್ಯುತ್ ಸ್ಥಾವರದ ಸುತ್ತಮುತ್ತ ಹಗಲಿನಲ್ಲಿ ಹುಲಿಯ ದರ್ಶನವಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಅಚ್ಚರಿ–ಆತಂಕ ಮೂಡಿಸಿದೆ.
ಕೈಗಾದಿಂದ ಯಲ್ಲಾಪುರ ಮಾರ್ಗದ ಬಾರೆ ಗ್ರಾಮದ ಬಳಿ ಕಾರಿನ ಸವಾರರಿಗೆ ಅಕಸ್ಮಾತ್ ಹುಲಿ ಎದುರಾಗಿದ್ದು, ಕ್ಷಣ ಮಾತ್ರದಲ್ಲಿ ಆತಂಕ ಸೃಷ್ಟಿಯಾಯಿತು. ಚಾಲಕ ಹಾಗೂ ಪ್ರಯಾಣಿಕರು ತಕ್ಷಣ ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಸೆರೆಹಿಡಿದಿದ್ದು, ಸದ್ಯ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆ ಪಕ್ಕದಲ್ಲಿದ್ದ ಹುಲಿ, ವಾಹನವನ್ನು ಕಂಡ ತಕ್ಷಣ ಗಾಬರಿಗೊಂಡು ಕಾಡಿನ ದಿಕ್ಕಿಗೆ ಗುಂಟ ನಡೆದುಕೊಂಡು ಹೋಗಿದೆ. ಸ್ಥಳೀಯರ ಪ್ರಕಾರ, ಕೈಗಾ ಸುತ್ತಮುತ್ತ ಹುಲಿ ಓಡಾಡುವುದು ಹೊಸದೇನಲ್ಲ. ಆದರೆ ಹಗಲಿನಲ್ಲಿ ಹೀಗೆ ರಾಜಾರೋಷವಾಗಿ ರಸ್ತೆ ಬದಿಯಲ್ಲಿ ಓಡಾಡಿರುವುದು ಅಪರೂಪ.
ಹಿಂದೆಯೂ ಕೈಗಾ ಅಣುವಿದ್ಯುತ್ ಸ್ಥಾವರದ ಗೇಟ್ ಬಳಿ ರಾತ್ರಿ ವೇಳೆಯಲ್ಲಿ ಹುಲಿ ಕಾಣಿಸಿಕೊಂಡಿದ್ದರೂ, ಹಗಲು ವೇಳೆ ದರ್ಶನ ನೀಡಿರುವುದು ಜನರಲ್ಲಿ ಹೊಸ ಕುತೂಹಲ ಹಾಗೂ ಸ್ವಲ್ಪ ಆತಂಕ ಹುಟ್ಟಿಸಿದೆ. ಆದರೆ ಇದುವರೆಗೂ ಹುಲಿಗಳಿಂದ ನೇರ ದಾಳಿಯ ಪ್ರಕರಣಗಳು ವರದಿಯಾಗಿಲ್ಲ. ಆದರೂ ಗ್ರಾಮಸ್ಥರು ಎಚ್ಚರಿಕೆಯಿಂದ ಸಂಚರಿಸುತ್ತಿದ್ದಾರೆ.


