ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ಇಲ್ಲಿನ ಹರೇಗಾಳಿ ಗ್ರಾಮದಲ್ಲಿ ಹುಲಿಯ ದಾಳಿಗೆ ಎರಡು ಎಮ್ಮೆಗಳು ಸಾವನ್ನಪ್ಪಿ, ಇನ್ನೆರಡು ಎಮ್ಮೆಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ಸಂಭವಿಸಿದೆ.
ಮೇಯಲೆಂದು ಎಂದಿನಂತೆ ಕಾಡಿನ ಅಂಚಿನತ್ತ ತೆರಳಿದ್ದ ಎಮ್ಮೆಗಳ ಮೇಲೆ ಏಕಾಏಕಿ ಹುಲಿ ದಾಳಿ ನಡೆಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹುಲಿ ದಾಳಿಗೆ ಒಳಗಾದ ಎಮ್ಮೆಗಳು ಹರೇಗಾಳಿ ಗ್ರಾಮದ ಸಕ್ಕುಬಾಯಿ ಬೋಡಕೆ ಯುವರಿಗೆ ಸೇರಿದ್ದವು. ಹೈನುಗಾರಿಕೆಯನ್ನು ನಂಬಿಕೊಂಡೇ ಜೀವನ ಸಾಗಿಸುತ್ತಿದ್ದ ಬಡಗೌಲಿ ಕುಟುಂಬಕ್ಕೆ ಈ ಎಮ್ಮೆಗಳು ಬದುಕಿನ ಪ್ರಮುಖ ಆಸರೆಯಾಗಿದ್ದವು. ದಾಳಿಯಲ್ಲಿ ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೆರಡು ಎಮ್ಮೆಗಳು ಗಂಭೀರವಾಗಿ ಗಾಯಗೊಂಡಿವೆ. ಗಾಯಗೊಂಡ ಎಮ್ಮೆಗಳಿಗೆ ಸ್ಥಳೀಯರು ಹಾಗೂ ಪಶುವೈದ್ಯರ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಎಮ್ಮೆಗಳ ಸಾವು–ನೋವಿನಿಂದ ಸಕ್ಕುಬಾಯಿ ಬೋಡಕೆ ಹಾಗೂ ಅವರ ಕುಟುಂಬ ತೀವ್ರವಾಗಿ ಚಿಂತಾಗ್ರಸ್ತವಾಗಿದೆ. ದಿನನಿತ್ಯದ ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದ ಕುಟುಂಬಕ್ಕೆ ಈ ನಷ್ಟ ದೊಡ್ಡ ಆಘಾತವಾಗಿದೆ. ಎಮ್ಮೆಗಳ ಹಾಲಿನ ಆದಾಯವೇ ಮನೆಯ ಖರ್ಚು, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಅಗತ್ಯಗಳಿಗೆ ಆಧಾರವಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಘಟನೆ ತಿಳಿದ ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗ್ರಾಮಸ್ಥರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕಾಡಿನ ಅಂಚಿನಲ್ಲಿರುವ ಹರೇಗಾಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಚಲನವಲನ ಹೆಚ್ಚುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಪಶುಸಂಪತ್ತಿಗೆ ರಕ್ಷಣೆಯ ಜೊತೆಗೆ ನಷ್ಟಪರಿಹಾರವನ್ನು ಶೀಘ್ರವಾಗಿ ಒದಗಿಸುವಂತೆ ಹಾಗೂ ಹುಲಿ ದಾಳಿಯಿಂದ ಗ್ರಾಮಸ್ಥರಿಗೆ ರಕ್ಷಣೆ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

