ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರ ಹೃದಯಭಾಗದಲ್ಲಿರುವ ಪ್ರಸಿದ್ಧ ರಾಧಾಕೃಷ್ಣ ದೇವಸ್ಥಾನದಲ್ಲಿ ಬೆಳ್ಳಿ ಕಳ್ಳತನ ನಡೆದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಮೇಲ್ಚಾವಣಿಯನ್ನು ತೆಗೆದು ಒಳನುಗ್ಗಿದ ಅಜ್ಞಾತ ಕಳ್ಳರು ದೇವರ ಅಲಂಕಾರಕ್ಕೆ ಬಳಸುತ್ತಿದ್ದ ಅಮೂಲ್ಯ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಮಂಗಳವಾರ ಬೆಳಿಗ್ಗೆ ಪೂಜೆಗಾಗಿ ದೇವಸ್ಥಾನ ಬಾಗಿಲು ತೆರೆಯುತ್ತಿದ್ದ ವೇಳೆ ಈ ಕಳ್ಳತನ ಪತ್ತೆಯಾಗಿದೆ. ಒಳಭಾಗದಲ್ಲಿ ವಸ್ತುಗಳು ಚದುರಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಘಟನೆ ಸ್ಥಳವನ್ನು ಕಂಡ ಭಕ್ತರು ಮತ್ತು ದೇವಸ್ಥಾನ ಸಮಿತಿ ಸದಸ್ಯರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಕಾರವಾರ ನಗರ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ ಆಭರಣಗಳ ನಿಖರ ಮೌಲ್ಯ ಅಂದಾಜು ಮಾಡುವ ಕೆಲಸ ಪ್ರಗತಿಯಲ್ಲಿದೆ.
ಪೊಲೀಸರು ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಗೆ ಕೈಹಾಕಿದ್ದು, ಕಳ್ಳರ ಸುಳಿವು ಪತ್ತೆಹಚ್ಚುವ ದಿಶೆಯಲ್ಲಿ ತನಿಖೆ ಮುಂದುವರೆದಿದೆ.


