ಕರಾವಳಿ ವಾಯ್ಸ್ ನ್ಯೂಸ್
ಕಾರವಾರ/ಸಿದ್ದಾಪುರ: ಬೆಂಗಳೂರಿನಲ್ಲಿ ತಾನು ಸಿನಿಮಾ ನಿರ್ಮಾಪಕ ಎಂದು ಹೇಳಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ಆರೋಪಿ ಎಂಬುದು ಬೆಳಕಿಗೆ ಬಂದಿದೆ.
ಹಾಸನ ಮೂಲದ ಹರ್ಷವಧನ ವೆಂಕಟೇಶ (29) ಎಂಬಾತನನ್ನು ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ಡಿಸೆಂಬರ್ 12ರಂದು ನ್ಯಾಯಾಲಯದ ವಾರಂಟ್ ಆಧಾರದ ಮೇಲೆ ಬಂಧಿಸಿದ್ದಾರೆ. ಈತನೇ ಬೆಂಗಳೂರಿನಲ್ಲಿ ‘ವರ್ಧನ್ ಸಿನಿಮಾಸ್’ ಕಂಪನಿಯ ಮಾಲೀಕನಾಗಿ ಪರಿಚಿತನಾಗಿರುವ ಹರ್ಷವರ್ಧನ್ ಎಂಬುದು ತನಿಖೆಯಿಂದ ದೃಢಪಟ್ಟಿದೆ.
2017ರಲ್ಲಿ ಸಿದ್ದಾಪುರದ ಹಲಗೇರಿ ಸಮೀಪದ ಕುಂಬಾರಕುಳಿ ಎಂಬ ಮನೆಯಲ್ಲಿ ಬಾಗಿಲಿನ ಬೀಗ ಮುರಿದು ಬಂಗಾರ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಮಂಜುನಾಥ ಗುಂಡ್ಲಪೇಟೆ ಹಾಗೂ ಹರ್ಷವರ್ಧನ್ ಎಂಬ ಇಬ್ಬರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಹರ್ಷವರ್ಧನ್ ವಿಚಾರಣೆಗೆ ಹಾಜರಾಗದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದಿಂದ 10 ಬಾರಿ ವಾರಂಟ್ ಜಾರಿ ಮಾಡಲಾಗಿತ್ತು. ಆದರೂ ವಿಚಾರಣೆಗೆ ಹಾಜರಾಗದ ಕಾರಣ, ಆರೋಪಿಯನ್ನು ಪತ್ತೆಹಚ್ಚಿ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಇನ್ಸ್ಪೆಕ್ಟರ್ ಸೀತಾರಾಮ ಜೆ.ಪಿ ಹಾಗೂ ಪಿಎಸ್‌ಐ ಶಾಂತಿನಾಥ ಪಾಸಾನೆ ನೇತೃತ್ವದ ವಿಶೇಷ ಪೊಲೀಸ್ ತಂಡವು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹರ್ಷವರ್ಧನ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಹರ್ಷವರ್ಧನ್ ವಿರುದ್ಧ ಮೈಸೂರು, ಉಡುಪಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಇನ್ನೂ ವಾರಂಟ್‌ಗಳು ಜಾರಿಯಲ್ಲಿವೆ. ಸಿದ್ದಾಪುರ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕವೂ ಹರ್ಷವರ್ಧನ್ ಮತ್ತೊಂದು ಕಿಡ್ನಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಪತ್ನಿ ಅಪಹರಣ ಪ್ರಕರಣ
ಹರ್ಷವರ್ಧನ್ ‘ನಿನ್ನಲ್ಲೇನೋ ಹೇಳಬೇಕು’ ಎಂಬ ಚಿತ್ರವನ್ನು ನಿರ್ಮಿಸಿದ್ದ. ಇದೇ ಚಿತ್ರದಲ್ಲಿ ನಟಿಸಿದ್ದ ಚೈತ್ರಾ ಎಂಬ ನಟಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಚೈತ್ರಾ ಕಿರುತೆರೆಯ ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಳು ಎನ್ನಲಾಗಿದೆ. ದಂಪತಿಗೆ ಒಬ್ಬ ಮಗಳಿದ್ದಳು.
ಪತಿ-ಪತ್ನಿಯ ನಡುವೆ ವಿರಸ ಉಂಟಾದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಚೈತ್ರಾ ಹರ್ಷವರ್ಧನ್‌ನಿಂದ ದೂರವಾಗಿ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಳು. ಮಗಳನ್ನು ನೋಡಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಹರ್ಷವರ್ಧನ್ ತನ್ನ ಸ್ನೇಹಿತನೊಂದಿಗೆ ಸೇರಿ ಪತ್ನಿಯನ್ನೇ ಅಪಹರಣ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಚೈತ್ರಾಳ ತಾಯಿಗೆ ಕರೆ ಮಾಡಿ, “ನಿನ್ನ ಮಗಳು ಬೇಕಿದ್ದರೆ ನನ್ನ ಮಗಳನ್ನು ತಂದು ಒಪ್ಪಿಸು” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಚೈತ್ರಾಳ ಸಹೋದರಿ ಲೀಲಾ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಸಿದ್ದಾಪುರದ ಮನೆ ಕಳ್ಳತನದಿಂದ ಹಿಡಿದು ಸಿನಿಮಾ ನಿರ್ಮಾಪಕನ ಹೆಸರಿನಲ್ಲಿ ಐಷಾರಾಮಿ ಜೀವನ ಹಾಗೂ ಕುಟುಂಬ ಕಲಹದ ಕಿಡ್ನಾಪ್ ಪ್ರಕರಣದವರೆಗೆ, ಹರ್ಷವರ್ಧನ್‌ನ ಅಪರಾಧ ಜಾಲ ಇದೀಗ ಬಹಿರಂಗವಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

