ಕರಾವಳಿ ವಾಯ್ಸ್ ನ್ಯೂಸ್

ಕುಮಟಾ: ಮಾಸೂರ ಕ್ರಾಸ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಸಾಹಸಿಕ ಕಳ್ಳತನ ಪ್ರಕರಣವನ್ನು ಕುಮಟಾ ಪೊಲೀಸರು ಚುರುಕಾಗಿ ತನಿಖೆ ನಡೆಸಿ ಭೇದಿಸಿರುವುದು ಗಮನ ಸೆಳೆದಿದೆ.

ರಾತ್ರಿ ಹೊತ್ತಿನಲ್ಲಿ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿ, ಲಾಕರ್ ಮೀಟಿ ನಗದು ಹಣ ಕಳ್ಳತನ ಮಾಡಿಕೊಂಡು ಪರಾರಿಯಾದ ಆರೋಪಿಗಳನ್ನು ಕೇವಲ ಹತ್ತು ದಿನಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 1ರಂದು ರಾತ್ರಿ 10 ಗಂಟೆಯಿಂದ ಫೆಬ್ರವರಿ 2ರಂದು ಬೆಳಿಗ್ಗೆ 6.15ರ ನಡುವೆ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಕಚೇರಿಯ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳಗೆ ಪ್ರವೇಶಿಸಿದ ಕಳ್ಳರು, ಆಫೀಸ್‌ನಲ್ಲಿದ್ದ ಕಪಾಟಿನ ಲಾಕರ್ ಬಾಗಿಲನ್ನು ಮೀಟಿ ತೆರೆಯುವ ಮೂಲಕ ರೂ. 25,000 ನಗದು ಹಣವನ್ನು ಕಳವು ಮಾಡಿಕೊಂಡು ಓಡಿಹೋಗಿದ್ದರು. ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದಾಗ ಕಿಟಕಿ ಮುರಿದಿರುವುದು ಮತ್ತು ಲಾಕರ್ ತೆರೆದಿರುವುದು ಕಂಡು ಬೆಚ್ಚಿಬಿದ್ದರು.

ತಕ್ಷಣವೇ ಕುಮಟಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 30/2026, ಕಲಂ 331(4), 305 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ಶ್ರೀ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು.

ಪಿ.ಎಸ್.ಐ.ಗಳಾದ ಶ್ರೀ ರವಿ ಗುಡ್ಡಿ, ಶ್ರೀ ಮಯೂರ ಪಟ್ಟಣಶೆಟ್ಟಿ, ಶ್ರೀಮತಿ ಸಾವಿತ್ರಿ ನಾಯಕ ನೇತೃತ್ವದಲ್ಲಿ ಸಿಬ್ಬಂದಿಗಳಾದ ದಯಾನಂದ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯಕ, ಚಿದಾನಂದ ನಾಯ್ಕ, ಗಿರೀಶ ನಾಯ್ಕ ಸೇರಿದಂತೆ ಇತರರು ಪ್ರಕರಣದ ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಗಳು, ಸ್ಥಳೀಯ ಮಾಹಿತಿ ದಾರರು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಚಲನವಲನ ಪತ್ತೆಹಚ್ಚಲಾಯಿತು.

ತನಿಖೆ ತೀವ್ರಗೊಳಿಸಿದ ಪೊಲೀಸರು ಫೆಬ್ರವರಿ 11ರಂದು ಅಸ್ಲಂ (18 ವರ್ಷ 6 ತಿಂಗಳು), ವನ್ನಳ್ಳಿ-ಕಲ್ಗುಡ್ಡ ನಿವಾಸಿ ಹಾಗೂ ಇನ್ನೊಬ್ಬ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದರು. ವಿಚಾರಣೆಯಲ್ಲಿ ಇಬ್ಬರೂ ಕೃತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ ಸುಮಾರು ರೂ. 3 ಲಕ್ಷ ಮೌಲ್ಯದ ಎರಡು ಸುಝುಕಿ ಬರ್ಗ್‌ಮನ್ ಸ್ಕೂಟರ್‌ಗಳು, ಕೃತ್ಯಕ್ಕೆ ಬಳಸಿದ ಆಯುಧಗಳು ಹಾಗೂ ಕಳ್ಳತನ ಮಾಡಿದ್ದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ಹಣವನ್ನು ಬೇರೆಡೆ ಖರ್ಚು ಮಾಡುವ ಮುನ್ನವೇ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದು ಗಮನಾರ್ಹ.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀ ಮಹೇಶ್ ಎಂ.ಕೆ. ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸ್ಥಳೀಯರಲ್ಲಿಯೂ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪೆಟ್ರೋಲ್ ಬಂಕ್‌ಗಳು ಸೇರಿದಂತೆ ವ್ಯಾಪಾರಿಕ ಸಂಸ್ಥೆಗಳು ರಾತ್ರಿಯ ವೇಳೆಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

 

Please Share: