ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಬಹುಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿರಸಿ ತಾಲೂಕಿನ ಮಳಲಿ ಗ್ರಾಮದ ಅರುಣ ಅಲಿಯಾಸ್ ಅರ್ಜುನ್ ಲಕ್ಷ್ಮಣ ಗೌಡಾ (28) ಬಂಧಿತ ಆರೋಪಿ. ಈತನ ವಿರುದ್ಧ ಶಿರಸಿ ಗ್ರಾಮೀಣ, ಬನವಾಸಿ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯ ಮೇಲೆ ಪೊಕ್ಸೊ ಕಾಯ್ದೆ, ಬಲಾತ್ಕಾರ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ, ಮೋಸ ಸೇರಿದಂತೆ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಹಾಗೂ ಅಸಹ್ಯಕರ ಭಾವಚಿತ್ರಗಳನ್ನು ಪೋಸ್ಟ್ ಮಾಡುವ ಆರೋಪಗಳಿವೆ.

ಪೊಲೀಸರು ಬಂಧಿಸಲು ಪ್ರಯತ್ನಿಸಿದ ಸಂದರ್ಭಗಳಲ್ಲಿ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಾಡಿನಲ್ಲೇ ಅಡಗಿ ತಪ್ಪಿಸಿಕೊಳ್ಳುತ್ತಿದ್ದನು ಎಂದು ತಿಳಿದುಬಂದಿದೆ. ನಿರಂತರ ಹುಡುಕಾಟದ ಬಳಿಕ ಶಿರಸಿ ಗ್ರಾಮೀಣ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ್ ಶಂಕರ ಹೂಗಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಸಂತೋಷಕುಮಾರ ಎಂ., ಅಶೋಕ ರಾಠೋಡ, ಎಎಸ್‌ಐ ಪ್ರಕಾಶ ತಳವಾರ ಹಾಗೂ ಸಿಬ್ಬಂದಿಗಳಾದ ವಿಘ್ನೇಶ್ವರ ಹೆಗಡೆ, ಮಾಂತೇಶ ಬಾರಕೇರ್, ಅಶೋಕ ನಾಯ್ಕ, ಅಭಿಷೇಕ ಆರ್., ಅರುಣಕುಮಾರ ವಿ., ಗಣಪತಿ ನಾಯ್ಕ, ವೆಂಕಟರಮಣ ನಾಯ್ಕ, ದಾವಲಸಾಬ ಕುಂದಿ ಮತ್ತು ಮಾರುತಿ ಗೌಡಾ ಪಾಲ್ಗೊಂಡಿದ್ದರು.

Please Share: