ಹೊನ್ನಾವರ: ವಿದೇಶಗಳಲ್ಲಿ ಉದ್ಯೋಗ ನೀಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸುತ್ತಿದ್ದ ಅಕ್ರಮ ವಿದೇಶಿ ನೇಮಕಾತಿ ಏಜೆನ್ಸಿಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಫಾಸ್ಕಲ್ ರೋಡ್ರಗೀಸ್, ವಿಜಯ ಎಂಪೈರ್, ಶಾಫ್ ನಂ. 6, 1ನೇ ಮಹಡಿ, ಎಮ್.ಎಸ್. ಟ್ರಾವೆಲ್ ಟಚ್ ಟೂರ್ ಅಂಡ್ ಟ್ರಾವೆಲ್ಸ್ (ರಯಾನ್ ಗ್ರೂಪ್), ಶರಾವತಿ ಸರ್ಕಲ್, ಬಜಾರ್ ರಸ್ತೆ, ಹೊನ್ನಾವರ ಇವರ ವಿರುದ್ಧ ವಲಸೆ ಕಾಯ್ದೆ 1983ರ ಉಲ್ಲಂಘನೆಯ ಆರೋಪ ದಾಖಲಾಗಿದೆ.
ಸಂಸ್ಥೆಯು “ವಿದೇಶಗಳಲ್ಲಿ ಕೆಲಸಕ್ಕೆ ನೇಮಕಾತಿ ಮಾಡಿಕೊಡುತ್ತೇವೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸುತ್ತಿದ್ದರೂ, ಯಾವುದೇ ಸರಕಾರಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ವಲಸೆ ಕಾಯ್ದೆ ಉಲ್ಲಂಘನೆ ಆಗಿದ್ದು, ಅಮಾಯಕ ವಲಸಿಗರನ್ನು ಮೋಸಗೊಳಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ವರದಿ ಹೇಳುತ್ತದೆ.
ಸಂಸ್ಥೆಗೆ ಮುಂಚಿತವಾಗಿ ಸೆಪ್ಟೆಂಬರ್ 9, 2025 ರಂದು ಎಚ್ಚರಿಕೆಯ ಶೋ-ಕಾಸ್ ನೋಟಿಸ್ ನೀಡಲಾಗಿದ್ದರೂ ಸಹ, ಅಕ್ರಮ ಚಟುವಟಿಕೆ ಮುಂದುವರಿಸಿದ ಆರೋಪವಿದೆ.
ಈ ಹಿನ್ನೆಲೆಯಲ್ಲಿ, ವಲಸೆ ಕಾಯ್ದೆ 1983ರ ಸೆಕ್ಷನ್ 10 ಮತ್ತು 24, ಜೊತೆಗೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಕಂಪನಿ, ಅದರ ನಿರ್ದೇಶಕರು ಹಾಗೂ ಕೆಲಸಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳಲ್ಲಿ ಒಬ್ಬರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


