ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ನಗರದ ಕೆ.ಸಿ. ವೃತ್ತದ ಹತ್ತಿರ ಶುಕ್ರವಾರ ಮಧ್ಯಾಹ್ನ ನಿತ್ಯದಂತೆ ಲಾರಿ ಬಂದು ನಿಂತಿತ್ತು. ಆದರೆ ಅದರ ಚಾಲಕನ ಹೃದಯದ ಓಟ ಆ ಕ್ಷಣವೇ ನಿಂತುಹೋಯಿತು! ಕೇವಲ ಕೆಲವು ನಿಮಿಷಗಳಲ್ಲಿ ಜೀವಂತ ವ್ಯಕ್ತಿ ನೆಲಕ್ಕುರುಳಿದ ದುಃಖದ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಮೃತರನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಟ್ಟಪಟ್ಟಿ ಗ್ರಾಮದ ಮುರ್ಗನ್ ಪಚ್ಚಪ್ಪನ್ (52) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಲಾರಿ ಚಾಲಕರಾಗಿರುವ ಇವರು ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ಹೊತ್ತು ದಾಂಡೇಲಿಗೆ ಆಗಮಿಸಿದ್ದರು. ಸರಕು ಖಾಲಿ ಮಾಡಿದ ನಂತರ ಹತ್ತಿರದ ಅಂಗಡಿ ಮಳಿಗೆಯ ಮೆಟ್ಟಿಲಿನ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಅಕಸ್ಮಿಕವಾಗಿ ಎದೆನೋವು ಕಾಣಿಸಿಕೊಂಡು ತಕ್ಷಣವೇ ಅಸ್ವಸ್ಥರಾದರು.
ಸ್ಥಳೀಯರು ವಿಷಯ ತಿಳಿದು ಅಚಾನಕ್ ಓಡಿ ಬಂದು ನೋಡಿದಾಗ, ಮುರ್ಗನ್ ಅವರು ಮೃತಪಟ್ಟ ಸ್ಥಿತಿಯಲ್ಲಿ ಇದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ದಾಂಡೇಲಿ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು.
ಚಾಲಕನ ಮರಣದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಹಚಾಲಕರು ಮತ್ತು ಸ್ಥಳೀಯರು ಬೆರಗಾಗಿದ್ದರು. ‘ಇನ್ನೇನೂ ಆಗೋದಿಲ್ಲ ಅಂತಾ ವಿಶ್ರಾಂತಿ ತೆಗೆದುಕೊಂಡ್ರು, ಹೀಗೆ ಹೋಗ್ತಾರೆ ಅಂತ ಯಾರು ಊಹಿಸಿರೋರು?’ಎಂದು ಸಾಕ್ಷಿಗಳು ವಿಷಾದ ವ್ಯಕ್ತಪಡಿಸಿದರು.
ಮೃತ ಮುರ್ಗನ್ ಪಚ್ಚಪ್ಪನ್ ತಮಿಳುನಾಡಿನ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಲಾರಿ ಚಾಲಕರಾಗಿ ಉದ್ಯೋಗ ಮಾಡುತ್ತಿದ್ದರು. ದಾಂಡೇಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


