ಕರಾವಳಿ ವಾಯ್ಸ್ ನ್ಯೂಸ್

ಗೋಕರ್ಣ: ಸಮುದ್ರದಲ್ಲಿ ಆಟವಾಡಲು ತೆರಳಿದ್ದ ಯುವತಿ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ ಘಟನೆ ದುರ್ಘಟನೆಯಲ್ಲಿ ಅಂತ್ಯಗೊಂಡಿದ್ದು, ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸೋಮವಾರ ಯುವತಿಯ ಮೃತದೇಹ ಪತ್ತೆಯಾಗಿದೆ.

ಮೃತ ಯುವತಿಯನ್ನು ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (22) ಎಂದು ಗುರುತಿಸಲಾಗಿದೆ. ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನ ಒಟ್ಟು 12 ವಿದ್ಯಾರ್ಥಿಗಳು ಪ್ರವಾಸಾರ್ಥವಾಗಿ ಗೋಕರ್ಣಕ್ಕೆ ಆಗಮಿಸಿದ್ದು, ಭಾನುವಾರ ಸಂಜೆ ಸುಮಾರು 7 ಗಂಟೆ ಸುಮಾರಿಗೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಅಲೆಗಳ ತೀವ್ರತೆಗೆ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದರು.

ಘಟನೆಯಲ್ಲಿ ಮಹಮದ್ ಅಲಿ (22) ಎಂಬ ವಿದ್ಯಾರ್ಥಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ದಡ ತಲುಪಿದ್ದು, ಸ್ಥಳೀಯರು ಹಾಗೂ ಸಹಪ್ರವಾಸಿಗರ ಸಹಾಯದಿಂದ ಖಾಸಗಿ ಅಂಬುಲೆನ್ಸ್ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಂಕೋಲಾ ತಾಲೂಕು ವೈದ್ಯಾಧಿಕಾರಿಯೂ ಆಗಿರುವ ಹಾಗೂ ಗೋಕರ್ಣ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಡಾ. ಜಗದೀಶ್ ನಾಯ್ಕ್ ಅವರು ಸಮಯೋಚಿತವಾಗಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಯುವಕನ ಜೀವವನ್ನು ರಕ್ಷಿಸಿದ್ದರು. ಚಿಕಿತ್ಸೆ ನಂತರ ಮಹಮದ್ ಅಲಿ ಅಪಾಯದಿಂದ ಪಾರಾಗಿದ್ದಾನೆ.

ಇನ್ನೊಂದೆಡೆ, ಸಮುದ್ರ ಸುಳಿಗೆ ಸಿಲುಕಿದ್ದ ಕಲ್ಯಾಣಿ ಪತ್ತೆಯಾಗದೆ ಆತಂಕ ಮುಂದುವರಿದಿತ್ತು. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ಆರಂಭಿಸಿ, ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆಯವರೆಗೂ ಸಮುದ್ರದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು.

ಶೋಧ ಕಾರ್ಯದ ಮುಂದುವರಿದ ಭಾಗವಾಗಿ, ಸೋಮವಾರ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಬೇಕೆಂದು ಪೊಲೀಸರು ಮತ್ತು ಸ್ಥಳೀಯ ಆಡಳಿತ ಮನವಿ ಮಾಡಿದ್ದಾರೆ.

 

 

Please Share: