ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕಳೆದ ಒಂದು ವಾರದಿಂದ ಗ್ರಾಮಸ್ಥರ ನಿದ್ದೆ ಕದಡುತ್ತಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಅಳವಡಿಸಿದ ಬೋನಿಗೆ ಬಿದ್ದ ಘಟನೆ ತಾಲೂಕಿನ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯ ಸಾವರಪೇ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಚಿತ್ತಾಕುಲ ಸುತ್ತಮುತ್ತ ಪ್ರದೇಶಗಳಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್‌ಎಫ್‌ಒ ವಿ.ಪಿ. ನಾಯ್ಕ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು.

ಕಳೆದ ಮೂರು ದಿನಗಳಿಂದ ಸಾವರಪೇ ಸಮೀಪ ಚಿರತೆ ಹಿಡಿಯಲು ಬೋನು ಅಳವಡಿಸಲಾಗಿತ್ತು. ಅರಣ್ಯ ಪ್ರದೇಶದಂತೆ ಕಾಣುವಂತೆ ಗಿಡಮರಗಳಿಂದ ಆವೃತವಾದ ಜಾಗದಲ್ಲಿ ಪಂಜರವನ್ನು ಕೊಂಬೆಗಳ ಮೂಲಕ ಮುಚ್ಚಿ ವ್ಯವಸ್ಥೆ ಮಾಡಲಾಗಿತ್ತು.

ಶುಕ್ರವಾರ ಬೆಳಿಗ್ಗೆ ಸುಮಾರು 6.30ರ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿರುವ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡರು. ಅಂದಾಜು 2ರಿಂದ 3 ವರ್ಷ ವಯಸ್ಸಿನ ಚಿರತೆಯನ್ನು ಸುರಕ್ಷಿತವಾಗಿ ವನ್ಯಜೀವಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.

ಈ ಘಟನೆಯಿಂದ ಆತಂಕದಲ್ಲಿದ್ದ ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಆರ್‌ಎಫ್‌ಒ ವಿ.ಪಿ. ನಾಯ್ಕ, ಡಿಆರ್‌ಎಫ್‌ಒ ಡಿ.ಆರ್. ನಾಯ್ಕ, ಗಣೇಶ ನಾಯ್ಕ, ರಮೇಶ್, ಕಿರಣಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

 

Please Share: