ಶಿರಸಿ: ಯಾವುದೇ ಪೂರ್ವ ತಯಾರಿ ಇಲ್ಲದೇ, ಕೇವಲ ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾತಿ ಸಮೀಕ್ಷೆ ನಡೆಸಲು ಹೊರಟಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಶುಕ್ರವಾರ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರಕಾರ ಈಗಾಗಲೇ ಜಾತಿ ಗಣತಿ ನಡೆಸುತ್ತಿರುವುದನ್ನು ಗೊತ್ತಿದ್ದರೂ, ರಾಜ್ಯ ಸರಕಾರವು 420 ಕೋಟಿ ರೂ. ಹೂಡಿಕೆ ಮಾಡಿ ತರಾತುರಿಯಲ್ಲಿ ಜಾತಿ ಸಮೀಕ್ಷೆ ಕೈಗೊಳ್ಳುತ್ತಿದೆ. ಇದು ರಾಜ್ಯದ ದೊಡ್ಡ ದುರಂತ” ಎಂದು ವಾಗ್ದಾಳಿ ನಡೆಸಿದರು.
ಅವರು ಮತ್ತಷ್ಟು ತೀವ್ರವಾಗಿ ಹರಿಹಾಯ್ದು, “160 ಕೋಟಿ ರೂ. ಖರ್ಚು ಮಾಡಿ ಸಿದ್ಧವಾದ ಕಾಂತರಾಜ ಹಾಗೂ ಜಯಪ್ರಕಾಶ ಹೆಗಡೆ ವರದಿಯನ್ನು ಮೂಲೆಗುಂಪು ಮಾಡಿದ ಸರ್ಕಾರ, ಇದೀಗ ಮತ್ತೆ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರ ನಡೆ ಸಮಾಜ ಒಡೆಯುವ ದುರಾಲೋಚನೆಗೆ ಸಾಕ್ಷಿ” ಎಂದು ಗಂಭೀರ ಆರೋಪ ಮಾಡಿದರು.
ಇದಲ್ಲದೆ ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ರಾಜ್ಯದ ರಸ್ತೆಗಳು ಗುಂಡಿಮಯವಾಗಿ ಜನರನ್ನು ನರಳಿಸುತ್ತಿವೆ. ಅಭಿವೃದ್ಧಿಗೆ ವೇಗ ಇಲ್ಲ. ಜನ ವಿರೋಧಿ ಈ ಕಾಂಗ್ರೆಸ್ ಸರಕಾರ ನವೆಂಬರ್‌ಗೂ ಮುಂಚೆ ಕುಸಿಯುವ ಲಕ್ಷಣ ಗೋಚರಿಸುತ್ತಿದೆ” ಎಂದು ಗರಂ ಆದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಆನಂದ ಸಾಲೇರ್, ರಾಘವೇಂದ್ರ ಶೆಟ್ಟಿ, ರವಿಚಂದ್ರ ಶೆಟ್ಟಿ, ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


