ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಕಬ್ಬಿನ ದರ ನಿಗದಿ ಕುರಿತಾಗಿ ಹಳಿಯಾಳದ ತಹಶಿಲ್ದಾರ ಕಚೇರಿಯಲ್ಲಿ ನಡೆದ ಸಭೆ ಶುಕ್ರವಾರ ಅಚ್ಚರಿಯ ನಾಟಕೀಯತೆ ಪಡೆದುಕೊಂಡಿತು. ಕೇವಲ ಮೂವತ್ತು ರೂಪಾಯಿಯ ವ್ಯತ್ಯಾಸಕ್ಕಾಗಿ ರೈತರನ್ನೂ ಅಧಿಕಾರಿಗಳನ್ನೂ ಮೂರು ಗಂಟೆಗಳ ಕಾಲ ಕಾಯಿಸಿದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ, ಈಗ ರೈತರ ಕೆಂಗಣ್ಣಿಗೆ ಗುರಿಯಾಗಿದೆ!
ಪ್ರಾರಂಭದಲ್ಲಿ ರೈತರು ಪ್ರತಿ ಟನ್‌ಗೆ ₹3363 ನೀಡುವಂತೆ ಬೇಡಿಕೆ ಇಟ್ಟರೆ, ಬಳಿಕ ಕನಿಷ್ಠ ₹3200 ರೂಪಾಯಿಯಲ್ಲಾದರೂ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದರು. ಆದರೆ ಕಾರ್ಖಾನೆ ಆಡಳಿತ ಮಂಡಳಿ “ಗರಿಷ್ಠ ₹3170 ಕ್ಕಿಂತ ಮೇಲು ಸಾಧ್ಯವಿಲ್ಲ” ಎಂದು ಹಠ ತೋರಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಧ್ಯವರ್ತಿಯಾಗಿ ಮಾತುಕತೆ ಮುಂದುವರೆಸಿದರೂ, ಕಾರ್ಖಾನೆ ನಿರ್ವಹಣೆಯ ಹಠದಿಂದ ಯಾವುದೇ ತೀರ್ಮಾನ ಹೊರಬರಲಿಲ್ಲ. ಕಾರ್ಖಾನೆಯ ಹಠದಿಂದ ಜಿಲ್ಲಾಧಿಕಾರಿಗಳು ಕೂಡ ಇಕ್ಕಟ್ಟಿಗೆ ಸಿಲುಕುವಂತಾಯಿತು. ಸಭೆಯಲ್ಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ರೈತರ ಜಟಾಪಟಿ ಮುಂದುವರೆದಿದೆ.
ಈಗಾಗಲೇ ಹಳಿಯಾಳ ಸೇರಿ ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ರೈತರು ಸಕ್ಕರೆ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಬೀದಿಗೆ ಇಳಿದಿದ್ದು — “ನಮ್ಮ ಬೆವರು, ನಮ್ಮ ಹಕ್ಕು — ಕಬ್ಬಿಗೆ ನ್ಯಾಯದ ದರ ಬೇಕು!” ಎಂದು ಘೋಷಣೆಗೈದಿದ್ದಾರೆ.

 
							





 
			 
			 
			 
			 
		 
			 
			 
			 
			