ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ನಗರದ ಫ್ಲೈಓವರ್ ಅಡಿಯಲ್ಲಿ ನಿಲ್ಲಿಸಿಟ್ಟಿದ್ದ ಟಾಟಾ 407 (KA 30 A 4732) ವಾಹನಕ್ಕೆ ಶನಿವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಆತಂಕ ಮೂಡಿಸಿದೆ.

ಬೆಂಕಿಗೀಡಾದ ವಾಹನವು ಕಾರವಾರ ತಾಮ್ಸೇವಾಡದ ಸಂತೋಶಿ ಸತೀಶ್ ಚೀಪ್ಕರ್ ಅವರಿಗೆ ಸೇರಿದ ಹಾಲಿನ ಗಾಡಿ ಎನ್ನಲಾಗಿದೆ. ಅದೃಷ್ಟವಶಾತ್, ಬೆಂಕಿ ಹೊತ್ತಿಕೊಂಡ ವೇಳೆ ವಾಹನ ಖಾಲಿಯಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.

ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಆದರೆ ಎಂಜಿನ್ ಭಾಗದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ.

ಘಟನೆಯಾಗುತ್ತಿದ್ದಂತೆಯೇ ಟ್ರಾಫಿಕ್ ಠಾಣೆಯ ಪಿಎಸ್‌ಐ ಶ್ರೀಕಾಂತ ರಾಥೋಡ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಶ್ರೀಶೈಲ ತಕ್ಷಣ ಸ್ಥಳಕ್ಕೆ ಧಾವಿಸಿ ಹತ್ತಿರದ ಪೆಟ್ರೋಲ್ ಬಂಕ್‌ನಿಂದ ಅಗ್ನಿಶಾಮಕ ಯಂತ್ರ ತರಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು.

ತಕ್ಷಣವೇ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸಮೀಪದ ಸಾರ್ವಜನಿಕ ಸ್ಥಳಗಳು ಮತ್ತು ಫ್ಲೈಓವರ್ ರಚನೆಗೆ ಯಾವುದೇ ಹಾನಿ ಆಗದಂತೆ ಭಾರೀ ಅನಾಹುತ ತಪ್ಪಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದೇ ವೇಳೆ ಟ್ರಾಫಿಕ್ ಠಾಣೆಯ ಪಿಎಸ್ ಐ ಶ್ರೀಕಾಂತ ರಾಥೋಡ್ ನೇತೃತ್ವದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಸಮರ್ಥ ನಿರ್ವಹಣೆ ನಡೆಸಿದರು.

ಫ್ಲೈಓವರ್ ಕೆಳಗಡೆ ಅನಧಿಕೃತವಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿ ಬಂದಿದೆ. ಈ ಘಟನೆ ಫ್ಲೈಓವರ್ ಸುರಕ್ಷತೆಗೆ ಎಚ್ಚರಿಕೆ ನೀಡಿದಂತಾಗಿದೆ.

Please Share: