ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಮುಡಗೇರಿಯ ಸ್ಮಶಾನದ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ದೊಡ್ಡ ಪ್ರಮಾಣದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 1,14,700 ರೂ. ಮೌಲ್ಯದ ಮದ್ಯ ಮತ್ತು ವಾಹನ ಜಪ್ತಿ ಮಾಡಲಾಗಿದೆ.
ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಮಂಗಳೂರು ಹಾಗೂ ಅಬಕಾರಿ ಉಪ ಆಯುಕ್ತರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ನಿರ್ದೇಶನದ ಮೇರೆಗೆ ಕಾರವಾರ ವಲಯದ ಮಾರ್ಗ ಸಂಖ್ಯೆ 02ರಲ್ಲಿ ಗಸ್ತು ವೇಳೆ ಖಚಿತ ಬಾತ್ಮಿ ಬಂದ ಹಿನ್ನೆಲೆಯಲ್ಲಿ ಮುಡಗೇರಿ ಅರಣ್ಯ ರಸ್ತೆಯ ಹತ್ತಿರ ದಾಳಿ ನಡೆಸಲಾಯಿತು.
ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ಕಂಡ ಆರೋಪಿಯೊಬ್ಬನು ಹೊಂಡಾ ಎಕ್ಟಿವಾ (ಕೆಎ-30/ಆರ್-4103) ಬೈಕ್‌ನ್ನು ಬಿಟ್ಟು ಸ್ಮಶಾನದ ಹಿಂದೆ ಇರುವ ದಟ್ಟ ಅರಣ್ಯಕ್ಕೆ ಪರಾರಿಯಾಗಿದ್ದಾನೆ.
ನಂತರ ಪರಿಶೀಲನೆ ವೇಳೆ ವಾಹನದಲ್ಲಿದ್ದ ನಾಲ್ಕು ನೈಲಾನ್ ಚೀಲಗಳಲ್ಲಿ 18 ಲೀಟರ್ ಗೋವಾ ಮದ್ಯ, 71.250 ಲೀಟರ್ ಗೋವಾ ಫೆನ್ನಿ, 24 ಲೀಟರ್ ಗೋವಾ ಬಿಯರ್ ಪತ್ತೆಯಾಗಿದ್ದು ಮೌಲ್ಯ ರೂ. 66,700 ಆಗಿದೆ. ದ್ವಿಚಕ್ರ ವಾಹನದ ಅಂದಾಜು ಮೌಲ್ಯ ರೂ. 48,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ಪತ್ತೆಗಾಗಿ ಅಬಕಾರಿ ಇಲಾಖೆ ಬಲೆ ಬೀಸಿದ್ದು, ಕಾರ್ಯಾಚರಣೆಯಲ್ಲಿ ಅಬಕಾರಿ ಅಧಿಕಾರಿ ಮಹಾಂತೇಶ ಹಾಗೂ ಜಿಲ್ಲಾ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.

