ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ರಾಜ್ಯದ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಮಹಾ ಜಾತ್ರೆಯ ದಿನಾಂಕವನ್ನು ದೇಗುಲ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಿಸಿದೆ.
ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ಮಾರಿಕಾಂಬಾ ದೇವಿ ಜಾತ್ರೆ ಭಕ್ತಿಭಾವ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯಲಿದೆ.
ಶಿರಸಿ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನಲೆ ಇದೆ. ಅತ್ಯಂತ ಸಾಂಪ್ರದಾಯಿಕ ವಿಧಿ–ವಿಧಾನಗಳು, ವೈಭವಯುತ ಆಚರಣೆಗಳು ಈ ಜಾತ್ರೆಯ ವಿಶೇಷವಾಗಿದ್ದು, ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ನಂಬಿಕೆಯಿಂದ ದೇವಿಯನ್ನು ಆರಾಧಿಸಿದ ಭಕ್ತರಿಗೆ ಸಕಲ ರೀತಿಯಲ್ಲಿಯೂ ದೇವಿಯ ಕೃಪೆ ದೊರೆಯುತ್ತದೆ ಎಂಬ ಆಸ್ಥೆ ಜನರಲ್ಲಿ ಆಳವಾಗಿ ನೆಲೆಯೂರಿದೆ.
ನಿತ್ಯವೂ ಸಾವಿರಾರು ಜನ ಶಿರಸಿಗೆ ಭೇಟಿ ನೀಡಿ ಪುರಾತನ ವಿನ್ಯಾಸಗಳಿಂದ ಅಲಂಕೃತವಾದ ಮಾರಿಕಾಂಬಾ ದೇವಾಲಯದ ಪವಿತ್ರ ಸನ್ನಿಧಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಕರ್ನಾಟಕದ ಅತಿದೊಡ್ಡ ಹಾಗೂ ಅತ್ಯಂತ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿ ಶಿರಸಿ ಜಾತ್ರೆಯನ್ನು ಪರಿಗಣಿಸಲಾಗುತ್ತದೆ.
ಜಾತ್ರೆ ಪೂರ್ವಭಾವಿಯಾಗಿ ಭಾನುವಾರ ಮಾರಿಕಾಂಬಾ ದೇಗುಲದ ಸಭಾ ಮಂಟಪದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಜಾತ್ರೆಯ ಸಿದ್ಧತೆಗಳು, ಜಾತ್ರಾ ಮೂಹೂರ್ತದಿಂದ ದೇವಿ ಮರುಪ್ರತಿಷ್ಠೆಯವರೆಗೆ ನಡೆಯುವ ವಿಧಿ ವಿಧಾನಗಳ ಕುರಿತು ವಿವರವಾಗಿ ಚರ್ಚೆ ನಡೆಸಿ, ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ಜಾತ್ರೆ ನಡೆಸುವ ಬಗ್ಗೆ ಅಧಿಕೃತ ಘೋಷಣೆ ಮಾಡಲಾಯಿತು.
ಜಾತ್ರೆಯ ಪೂರ್ವ ವಿಧಿ ವಿಧಾನಗಳು ಜನವರಿ 7ರಿಂದ ಆರಂಭವಾಗಲಿವೆ. ಫೆಬ್ರವರಿ 24ರಂದು ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಫೆಬ್ರವರಿ 25ರಂದು ರಥರೋಹಣ ನಡೆಯಲಿದ್ದು, 26ರಿಂದ ಭಕ್ತಾದಿಗಳ ಸೇವೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮಾರ್ಚ್ 4ರಂದು ಜಾತ್ರೆ ಮುಕ್ತಾಯವಾಗಲಿದ್ದು, ಮಾರ್ಚ್ 19ರಂದು ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠಾ ಕಾರ್ಯ ನೆರವೇರಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಜಾತ್ರೆಯನ್ನು ಶಿಸ್ತಿನಿಂದ ಹಾಗೂ ಭವ್ಯವಾಗಿ ನಡೆಸಲು ದೇಗುಲ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

