ಶಿರಸಿ: ತಾಲೂಕಿನ ಪ್ರಸಿದ್ಧ ಬೆಣ್ಣೆಹೊಳೆ ಜಲಪಾತದಲ್ಲಿ ಬಿದ್ದು ನಾಪತ್ತೆಯಾಗಿದ್ದ ಹೂವಿನಹಡಗಲಿಯ ರಾಹುಲ್ (ವಿದ್ಯಾರ್ಥಿ) ಅವರ ಶವವು ಗುರುವಾರ ಪತ್ತೆಯಾಗಿದೆ.
ಭಾನುವಾರ ನಗರದ ಅರಣ್ಯ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಜಲಪಾತ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಇಬ್ಬರು ವಿದ್ಯಾರ್ಥಿಗಳು ಕಾಲುಜಾರಿ ನೀರಿನಲ್ಲಿ ಬಿದ್ದರು. ಹೊಸಪೇಟೆಯ ಶ್ರೀನಿವಾಸನನ್ನು ಗೆಳೆಯರು ಸ್ಥಳೀಯರ ಸಹಕಾರದಿಂದ ಬದುಕುಳಿಸಿದರೆ, ರಾಹುಲ್ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
ಘಟನೆಯ ನಂತರ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಶೋಧ ಕಾರ್ಯ ಆರಂಭಿಸಿತು. ಶಿರಸಿ ಗ್ರಾಮೀಣ ಠಾಣೆ ಪೊಲೀಸರ ಸಹಕಾರದಿಂದ ಗೋಪಾಲ ಗೌಡ ನೇತೃತ್ವದ ಲೈಫ್ ಗಾರ್ಡ್ ತಂಡವು ಡ್ರೋನ್‌ಗಳ ನೆರವಿನಿಂದ ಸತತ ಐದು ದಿನ ಶೋಧ ನಡೆಸಿ, ಕೊನೆಗೆ ಜಲಪಾತದಿಂದ ಸುಮಾರು 2 ಕಿಮೀ ದೂರದಲ್ಲಿ ತೇಲಿ ಬಂದಿದ್ದ ಶವವನ್ನು ಪತ್ತೆಹಚ್ಚಿದೆ.


