ಕರಾವಳಿ ವಾಯ್ಸ್ ನ್ಯೂಸ್

ಖಮ್ಮಂ (ತೆಲಂಗಾಣ): ಶಾಲೆಗೆ ಬರವಣಿಗೆಗಾಗಿ ತಂದಿದ್ದ ಪೆನ್ಸಿಲ್ ಒಂದೇ ಆರು ವರ್ಷದ ಪುಟ್ಟ ಬಾಲಕನ ಪ್ರಾಣವನ್ನು ಬಲಿ ಪಡೆದಿರುವ ಹೃದಯವಿದ್ರಾವಕ ಘಟನೆ ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದಲ್ಲಿ ಬುಧವಾರ ಸಂಭವಿಸಿದೆ.

ಮೃತ ಬಾಲಕನನ್ನು ವಿಹಾರ್ ಎಂದು ಗುರುತಿಸಲಾಗಿದ್ದು, ಅವನು ಕುಸುಮಂಚಿ ಮಂಡಲದ ನಾಯಕಕಂಗುಡೆಂ ಗ್ರಾಮದ ಖಾಸಗಿ ಶಾಲೆಯಲ್ಲಿ ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಶಾಲೆಗೆ ತೆರಳಿದ್ದ ವಿಹಾರ್, ಮಧ್ಯಾಹ್ನದ ವಿರಾಮದ ಸಮಯದಲ್ಲಿ ಶೌಚಾಲಯಕ್ಕೆ ತೆರಳಿದ್ದನು. ಬಳಿಕ ತನ್ನ ತರಗತಿಯತ್ತ ಓಡುತ್ತಾ ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾನೆ.

ಅಪಘಾತದ ವೇಳೆ ಅವನು ಕೈಯಲ್ಲಿ ಹಿಡಿದಿದ್ದ ಪೆನ್ಸಿಲ್ ನೇರವಾಗಿ ಗಂಟಲಿಗೆ ಚುಚ್ಚಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ತಕ್ಷಣ ಬಾಲಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ದುರ್ಘಟನೆ ಸುದ್ದಿ ತಿಳಿದಂತೆ ಶಾಲಾ ಆವರಣದಲ್ಲಿ ಆತಂಕ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದ್ದು, ಸಹಪಾಠಿಗಳು ಹಾಗೂ ಶಿಕ್ಷಕರು ಶೋಕದಲ್ಲಿ ಮುಳುಗಿದ್ದಾರೆ. ಮಗನ ಅಕಾಲಿಕ ಸಾವಿನ ಸುದ್ದಿ ತಿಳಿದು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆ ಕುರಿತಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಇದೀಗ ಕೇಳಿಬರುತ್ತಿದೆ.

ಪುಟ್ಟ ಬಾಲಕನ ಅಕಸ್ಮಿಕ ಹಾಗೂ ದಾರುಣ ಸಾವು ಸಾರ್ವಜನಿಕರಲ್ಲಿ ತೀವ್ರ ಬೇಸರ ಮತ್ತು ಕಳವಳ ಮೂಡಿಸಿದೆ.

 

Please Share: