ಕಾರವಾರ: ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ವಿರೋಧದ ಧ್ವನಿ ದೇಶದ ಗಡಿ ದಾಟಿ ವಿದೇಶದಲ್ಲಿಯೂ ಕೇಳಿಬರುತ್ತಿದೆ. ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಸೂಪರ್-4 ಪಂದ್ಯಾವಳಿಯಲ್ಲಿಯೂ ‘ಶರಾವತಿ ಉಳಿಸಿ’ ಪೋಸ್ಟರ್ ಗಮನ ಸೆಳೆದಿದೆ.

ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಾವಳಿಯ ಸಮಯದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮೂವರು ಯುವಕರು “ಶರಾವತಿ ಉಳಿಸಿ – ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಬೇಡ” ಎಂಬ ಬರಹವಿದ್ದ ಪೋಸ್ಟರ್ ಪ್ರದರ್ಶಿಸಿದರು. ಈ ದೃಶ್ಯ ಪಂದ್ಯಾವಳಿಯ ನೇರ ಪ್ರಸಾರದಲ್ಲೇ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿದ್ದು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ, ಪೋಸ್ಟರ್ ಹಿಡಿದ ಯುವಕರ ಪರಿಚಯ ಇನ್ನೂ ತಿಳಿದುಬಂದಿಲ್ಲ.

ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಅಭಿಯಾನ

ಶರಾವತಿ ಯೋಜನೆ ವಿರೋಧವನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಲು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಯುವಕರು ಒಟ್ಟಾಗಿ ಮುಂದಾಗಿದ್ದಾರೆ. “ಸ್ಟಾಪ್ ಶರಾವತಿ ಪಂಪ್ಸ್ ಸ್ಟೋರೇಜ್” ಹ್ಯಾಶ್‌ಟ್ಯಾಗ್ ಬಳಸಿ ಶೀಘ್ರದಲ್ಲೇ ‘ಎಕ್ಸ್’ ನಲ್ಲಿ ಅಭಿಯಾನ ಆರಂಭಗೊಳ್ಳಲಿದೆ. ಇದಕ್ಕೆ ಬೆಂಬಲ ನೀಡುವಂತೆ ಈಗಾಗಲೇ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡುತ್ತಿದ್ದಾರೆ.

 

 

Please Share: