ನವದೆಹಲಿ: ಪ್ರಸ್ತಾವಿತ ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ನಿರ್ದೇಶನ ನೀಡಿದೆ.
ಮಂಡಳಿಯ ಸ್ಥಾಯಿ ಸಮಿತಿಯ 85ನೇ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಯೋಜನೆಗೆ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿರುವುದನ್ನು ಸದಸ್ಯರು ಪ್ರಶ್ನಿಸಿ, ಸ್ಥಳ ಪರಿಶೀಲನೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಜೂನ್‌ನಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಎಚ್.ಎಸ್. ಸಿಂಗ್ ಮತ್ತು ಆರ್. ಸುಕುಮಾರ್ ಯೋಜನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. “ಪಶ್ಚಿಮ ಘಟ್ಟದ ಹೃದಯ ಭಾಗದಲ್ಲೇ ಯೋಜನೆ ಜಾರಿಯಾಗಲಿದ್ದು, ಈ ಪ್ರದೇಶವನ್ನು ಯುನೆಸ್ಕೋ ಜೀವವೈವಿಧ್ಯ ತಾಣವೆಂದು ಗುರುತಿಸಿದೆ. ಯೋಜನೆ ಅನುಷ್ಠಾನಗೊಂಡರೆ ಅಪಾರ ಹಾನಿ ಸಂಭವಿಸಬಹುದು. ತರಾತುರಿಯಲ್ಲಿ ಒಪ್ಪಿಗೆ ನೀಡಿರುವುದು ಸರಿಯಲ್ಲ, ಮರುಪರಿಶೀಲನೆ ಅಗತ್ಯ” ಎಂದು ಅವರು ಎಚ್ಚರಿಸಿದ್ದರು.
ಇದೀಗ ನಡೆದ ಸಭೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಸಹ ಈ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸ್ಥಳ ಪರಿಶೀಲನೆಗಾಗಿ ಎಸ್.ಎಸ್. ಸಿಂಗ್, ಆರ್. ಸುಕುಮಾರ್ ಹಾಗೂ ಇಲಾಖೆಯ ನಾಮನಿರ್ದೇಶಿತ ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಅವರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
₹9,000 ಕೋಟಿ ವೆಚ್ಚದ 2,000 ಮೆಗಾವಾಟ್ ಯೋಜನೆ
ಈ ಯೋಜನೆ ಅಡಿಯಲ್ಲಿ ತಲಾ 250 ಮೆಗಾವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಘಟಕಗಳನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ. ಬಳಸಿದ ನೀರನ್ನು ಮತ್ತೆ ಪಂಪ್‌ಗಳ ಮೂಲಕ ಮೇಲಕ್ಕೆ ಕೊಂಡೊಯ್ದು ಮರುಬಳಕೆ ಮಾಡುವ ವ್ಯವಸ್ಥೆ ಇದಾಗಿದೆ. ಒಟ್ಟು 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿಯಿದೆ.
ಈ ಯೋಜನೆಗೆ 352.77 ಎಕರೆ ಭೂಮಿ ಅಗತ್ಯವಿದ್ದು, ಅದರಲ್ಲಿ 133.81 ಎಕರೆ ಅರಣ್ಯ ಭೂಮಿಯಾಗಿದೆ. 2024ರ ಆಗಸ್ಟ್‌ನಲ್ಲಿ ಕೇಂದ್ರ ವಿದ್ಯುತ್ ಪ್ರಾಧಿಕಾರ (CEA) ಯೋಜನೆಯ ಡಿಪಿಆರ್‌ಗೆ ಅನುಮೋದನೆ ನೀಡಿತ್ತು.


