ಕಾರವಾರ: ಕರ್ನಾಟಕ ರಾಜ್ಯವು ಶರಾವತಿ ಕಣಿವೆಯಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ (PSP) ಜಾರಿಗೆ ಮುಂದಾಗಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಈ ಯೋಜನೆಯನ್ನು “ಅತಿ ಕಡಿಮೆ ಪರಿಸರ ಹಾನಿಯೊಂದಿಗೆ” ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪರಿಸರಕ್ಕೆ ತೊಂದರೆ ಕಡಿಮೆ: ಈ ಯೋಜನೆಗೆ ಹೊಸ ಅಣೆಕಟ್ಟೆ ನಿರ್ಮಾಣವಿಲ್ಲ. ಈಗಿರುವ ಗೇರುಸೊಪ್ಪ ಹಾಗೂ ತಲಕಳಲೆ ಅಣೆಕಟ್ಟೆಗಳನ್ನೇ ಬಳಸಿಕೊಳ್ಳಲಾಗುತ್ತಿದ್ದು, ನೀರಿನ ಹರಿವುಗಾಗಿ ಭೂಮಿಯ ಆಳದಲ್ಲಿ ಸುರಂಗ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಮೇಲ್ಮೈಯಲ್ಲಿರುವ ಮರ-ಗಿಡಗಳಿಗೆ ಹಾನಿಯಾಗುವುದಿಲ್ಲ. ಸುರಂಗ ಪ್ರವೇಶದ ಸುತ್ತ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಸಿದರೂ, ನಂತರ ಪುನಃ ಅರಣ್ಯೀಕರಣ ಕೈಗೊಳ್ಳಲಾಗುವುದು.

ಸಿಂಗಳಿಕ ಸಂರಕ್ಷಣೆ: ಶರಾವತಿ ಕಣಿವೆಯ ಅಪರೂಪದ ಸಿಂಗಳೀಕ ಸಂಚಾರಕ್ಕೆ ಅಡ್ಡಿಯಾಗದಂತೆ “ಟ್ರೇ ಕ್ಯಾನೋಪಿ” (ಮೇಲ್ಸೇತುವೆ ಮಾರ್ಗ) ನಿರ್ಮಿಸಲು ಕೆಪಿಸಿಎಲ್ ಮುಂದಾಗಿದೆ. ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಯಲಿದೆ.

ನೀರಿನ ಬಳಕೆ ಕೇವಲ 0.37 ಟಿಎಂಸಿ: ಲಿಂಗನಮಕ್ಕಿ ಜಲಾಶಯದಲ್ಲಿ ಸಂಗ್ರಹವಾಗುವ 140–220 ಟಿಎಂಸಿ ನೀರಿನಿಂದ ಈಗಾಗಲೇ ಜಲವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಪಂಪ್ಡ್ ಸ್ಟೋರೇಜ್ ಯೋಜನೆಗೆ ದೀರ್ಘಾವಧಿಗೆ ಕೇವಲ 0.37 ಟಿಎಂಸಿ ನೀರನ್ನಷ್ಟೇ ಒಮ್ಮೆ ಬಳಕೆ ಮಾಡಲಾಗುವುದು. ಕೃಷಿ, ಕುಡಿಯುವ ನೀರು ಅಥವಾ ಮೀನುಗಾರಿಕೆಗೆ ಬಳಕೆಯಾಗುವ ನೀರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಖಾತರಿಪಡಿಸಿದ್ದಾರೆ.

ಗುಡ್ಡ ಕುಸಿತದ ಭೀತಿ ಬೇಡ: ಭೂವೈಜ್ಞಾನಿಕ ಸರ್ವೇಯ ಪ್ರಕಾರ ಯೋಜನಾ ವ್ಯಾಪ್ತಿಯಲ್ಲಿ ಸುರಂಗ ನಿರ್ಮಾಣದಿಂದ ಗುಡ್ಡ ಕುಸಿತ ಸಾಧ್ಯತೆ ಇಲ್ಲ. ಹೀಗಾಗಿ ಈ ಬಗ್ಗೆ ಆತಂಕ ಬೇಡ ಎಂದು ಕೆಪಿಸಿಎಲ್ ಸ್ಪಷ್ಟಪಡಿಸಿದೆ.

“ನೀರಿನ ಬ್ಯಾಟರಿ” – ಬೇಡಿಕೆಗೆ ತಕ್ಕಂತೆ ವಿದ್ಯುತ್ :ಈ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಹಗಲು ವೇಳೆ ಹೆಚ್ಚುವರಿ ಸೌರ-ಗಾಳಿ ವಿದ್ಯುತ್ ಬಳಸಿ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ. ರಾತ್ರಿ ಅಥವಾ ಹೆಚ್ಚು ಬೇಡಿಕೆಯ ಸಮಯದಲ್ಲಿ ನೀರನ್ನಿಳಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ತಜ್ಞರು “ನೀರಿನ ಬ್ಯಾಟರಿ” ಎಂದು ಕರೆಯುತ್ತಾರೆ.

ಅತಿ ಕಡಿಮೆ ಭೂಮಿ ಬಳಕೆ: ಒಟ್ಟು 100.645 ಹೆಕ್ಟೇರ್ ಭೂಮಿ (248.7 ಎಕರೆ) ಮಾತ್ರ ಯೋಜನೆಗೆ ಬಳಸಲಾಗುತ್ತಿದ್ದು, ಇದರಲ್ಲಿ 54 ಹೆಕ್ಟೇರ್ ಅರಣ್ಯ ಪ್ರದೇಶವಾಗಿದೆ. ಅರಣ್ಯ ನಷ್ಟವನ್ನು ತಡೆಗಟ್ಟಲು, ಸಮಾನ ಪ್ರಮಾಣದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವುದರೊಂದಿಗೆ ಪುನರ್ ಅರಣ್ಯೀಕರಣ ನಡೆಯಲಿದೆ.

ಸಾರ್ವಜನಿಕರಿಗೂ ಮಾಹಿತಿ ಲಭ್ಯ: ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿ ಜಿಲ್ಲಾಧಿಕಾರಿ ಹಾಗೂ ಪಂಚಾಯಿತಿ ಕಚೇರಿಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ನೇರವಾಗಿ ಪರಿಶೀಲಿಸಬಹುದು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ನಲ್ಲೂ ಸಾಫ್ಟ್ ಕಾಪಿ ಲಭ್ಯ.

ವಿವಾದದ ನಡುವೆಯೂ ವಿಶ್ವಾಸ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಪರಿಸರವಾದಿಗಳ ಆಕ್ರೋಶ ಮುಂದುವರಿದಿದ್ದರೂ, “ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ” ಎಂದು ಕೆಪಿಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

 

 

 

 

Please Share: