ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿಭಜನೆ ಹೋರಾಟವು ಅಭಿವೃದ್ಧಿ ಉದ್ದೇಶಕ್ಕಿಂತಲೂ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳ ಸ್ವಾರ್ಥಕ್ಕಾಗಿ ಮಾತ್ರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರ ಪಟಗಾರ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಸಂಘಟನೆಯಾದ ‘ಕರಾವಳಿ ಕನ್ನಡ ಸಂಘ’ ರಚನೆ ಕುರಿತು ಮಾಹಿತಿ ನೀಡಿ ಮಾತನಾಡಿದರು.
“ಜಿಲ್ಲೆಯ ವಿಭಜನೆ ಕೂಗು ಹೆಚ್ಚಾಗಿದೆ. ಆದರೆ ‘ವಿಭಜನೆ ಮಾಡಬೇಕು’ ಎಂದು ಹೇಳುತ್ತಿರುವವರು ಶಿರಸಿ ಮತ್ತು ಸಿದ್ದಾಪುರದ ಕೆಲವರಷ್ಟೇ. ಉಳಿದ ತಾಲೂಕುಗಳ ಜನರಿಗಂತೂ ಈ ಕುರಿತು ಆಸಕ್ತಿ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಯೋಚನೆ ಇಲ್ಲದೆ, ಸ್ವಾರ್ಥದ ದೃಷ್ಟಿಯಿಂದಲೇ ಕೆಲವರು ವಿಭಜನೆ ಹೋರಾಟ ಮಾಡುತ್ತಿದ್ದಾರೆ,” ಎಂದು ಅವರು ಟೀಕಿಸಿದರು.
ಅವರು ಮುಂದುವರೆದು, “ಬೆಳಗಾವಿ ಜಿಲ್ಲೆಗೆ ಹೆಚ್ಚು ತಾಲೂಕುಗಳಿವೆ; ಅದರಿಂದ ಅಭಿವೃದ್ಧಿಯು ಅಲ್ಲಿ ವೇಗವಾಗಿದೆ. ನಮ್ಮ ಉತ್ತರ ಕನ್ನಡದಲ್ಲಿಯೂ ಹೊಸ ತಾಲೂಕುಗಳು ಅಗತ್ಯವಿದೆ. ಆದರೆ ವಿಭಜನೆ ಮಾತ್ರ ಪರಿಹಾರವಲ್ಲ. ಇಂದು ಉತ್ತರ ಕನ್ನಡ ಜಿಲ್ಲೆಯ ವಿಭಜನೆಗಾಗಿ ಹೋರಾಟ ಆರಂಭವಾದರೆ, ನಾಳೆ ‘ಬೆಂಗಳೂರು ದೂರವಾಗಿದೆ, ಬೇರೆ ರಾಜ್ಯ ಕೊಡಿ’ ಎಂದು ಕೇಳುವ ಪರಿಸ್ಥಿತಿ ಉಂಟಾಗಬಹುದು. ಬಳಿಕ ‘ದೆಹಲಿ ದೂರವಾಗಿದೆ, ಪ್ರತ್ಯೇಕ ರಾಷ್ಟ್ರ ಕೊಡಿ’ ಎಂದು ಹೇಳುವ ಹಾದಿ ತಲುಪಬಹುದು. ಆದ್ದರಿಂದ ವಿಭಜನೆ ಬದಲು ಕರಾವಳಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಹೋರಾಡೋಣ,” ಎಂದು ಅವರು ಕರೆ ನೀಡಿದರು.
ಅವರು ಮುಂದುವರೆದು, “ಗಡಿಭಾಗದಲ್ಲಿ ಕೈಗಾರಿಕೆಗಳು, ಕನ್ನಡ ಶಾಲೆಗಳು ಹಾಗೂ ಗಡಿಭಾಗದ ಗ್ರಾಮಗಳು ಅಭಿವೃದ್ಧಿಗೆ ಹೋರಾಟ ಮಾಡಬೇಕಿದೆ. ಇಲ್ಲಿನ ಜನರ 80% ಉದ್ಯೋಗಾವಕಾಶ ಹೊರಗಿನವರು ಪಡೆಯುತ್ತಿದ್ದಾರೆ. ಈ ವೇಳೆ ಜಿಲ್ಲೆ ವಿಭಜನೆ ಮಾಡುವ ಬದಲು ಒಗ್ಗಟ್ಟಿನಿಂದ ಹೋರಾಡಬೇಕು. ಮುಂದಿನ ದಿನಗಳಲ್ಲಿ ಗೋವಾ ಮತ್ತು ಎಂಇಎಸ್ ಸಂಘಟನೆಗಳ ಆಟಾಟೋಪಗಳ ವಿರುದ್ಧ ಹೋರಾಟ ನಡೆಸುವ ಯೋಜನೆಯಿದೆ,” ಎಂದು ಹೇಳಿದರು.
ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಈಗ ಜೀವವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. “ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇಲ್ಲದ ಕಾರಣದಿಂದ, ಅನೇಕ ಜನರಿಗೆ ‘ಉತ್ತರ ಕನ್ನಡ’ ಎಂಬ ಜಿಲ್ಲೆ ಇದೆ ಎಂಬುದೇ ಗೊತ್ತಿಲ್ಲ!” ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮಹೇಂದ್ರ ನಾಯ್ಕ, ಕೃಷ್ಣ ಹೆಗಡೆ, ರಂಜನ್ ದೇವಾಡಿಗ, ಬಲೀಂದ್ರ ಗೌಡ, ಶ್ರೀಕಾಂತ ಪಟಗಾರ ಹಾಗೂ ಮೋಹನ ಉಪಸ್ಥಿತರಿದ್ದರು.


