ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಮನಸ್ಸಿನ ಒತ್ತಡದಿಂದ ತನ್ನ ಜೀವಕ್ಕೂ ರಕ್ಷಣೆ ಸಿಗದೆ ಸೆಕ್ಯೂರಿಟಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ದುರ್ಘಟನೆ ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ನಡೆದಿದೆ.
ಖಾಸಗಿ ಬ್ಯಾಂಕ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿರಾಲಿ ಚಿತ್ರಾಪುರ ನಿವಾಸಿ ಶಂಕರ ತಂದೆ ನಾಗಪ್ಪ ದೇವಡಿಗ (32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ವೈಯಕ್ತಿಕ ಕಾರಣಗಳಿಂದ ಮನನೊಂದು, ಜೀವನದ ಮೇಲೆ ಆಸಕ್ತಿ ಕಳೆದುಕೊಂಡ ಶಂಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿರಾಲಿ ಚಿತ್ರಾಪುರದಲ್ಲಿರುವ ಖಾಸಗಿ ಬ್ಯಾಂಕ್ನ ಹಿಂಭಾಗದ ವಾಶ್ರೂಮ್ ಪಕ್ಕದ ಪಾಕಾಶಿಯಲ್ಲಿ ನೈಲಾನ್ ದಾರದಿಂದ ಉರುಳು ಹಾಕಿಕೊಂಡ ಸ್ಥಿತಿಯಲ್ಲಿ ಶಂಕರ ಅವರ ಮೃತದೇಹ ಪತ್ತೆಯಾಗಿದೆ. ಬೆಳಗಿನ ಜಾವ ಬ್ಯಾಂಕ್ ಸಿಬ್ಬಂದಿ ಗಮನಿಸಿದ ಬಳಿಕ ವಿಷಯ ಪೊಲೀಸರಿಗೆ ತಿಳಿಸಲಾಗಿದೆ.
ಘಟನೆ ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಮೃತನ ಅಕ್ಕ ಶೋಭಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಡಿಮೆ ವೇತನ, ನಿರಂತರ ಕರ್ತವ್ಯದ ಒತ್ತಡ ಹಾಗೂ ವೈಯಕ್ತಿಕ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು, ಎಲ್ಲಾ ಆಯಾಮಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮಾಜದ ರಕ್ಷಣೆಗೆ ನಿಲ್ಲುವ ಸೆಕ್ಯೂರಿಟಿ ಗಾರ್ಡ್ಗೆ ತನ್ನ ಜೀವನಕ್ಕೆ ರಕ್ಷಣೆ ಸಿಗದಂತಾಗಿರುವುದು ಸಾರ್ವಜನಿಕ ವಲಯದಲ್ಲಿ ವಿಷಾದಕ್ಕೆ ಕಾರಣವಾಗಿದೆ. ಮೃತ ಶಂಕರ ಅವರ ಅಕಾಲಿಕ ಸಾವಿಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.
