ದಾಂಡೇಲಿ: ತಾಲೂಕಿನ ಕುಳಗಿ ಗ್ರಾಮದಲ್ಲಿ ಎಮ್ಮೆಗೆ ಡಿಕ್ಕಿ ಹೊಡೆದ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ನಡೆದಿದೆ.
ಮೃತರನ್ನು ಕುಳಗಿ ಗ್ರಾಮದ ನಿವಾಸಿ ಭಾಷಾ ಸಾಬ್ ಸನದಿ (50) ಎಂದು ಗುರುತಿಸಲಾಗಿದೆ. ದಾಂಡೇಲಿಯಿಂದ ಕುಳಗಿಯ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ರಸ್ತೆಯಲ್ಲಿ ಏಕಾಏಕಿ ಎಮ್ಮೆ ಅಡ್ಡ ಬಂದಿದ್ದು, ಸವಾರ ನಿಯಂತ್ರಣ ತಪ್ಪಿ ನೇರವಾಗಿ ಎಮ್ಮೆಗೇ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಎಮ್ಮೆಗೇ ಅಪ್ಪಳಿಸಿ ನಂತರ ರಸ್ತೆ ಮೇಲೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


