ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಅರಣ್ಯ ಇಲಾಖೆಯ ಅಧಿಕಾರಿಯಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ನೆಲೆಯಲ್ಲಿ ಮಂಜುನಾಥ ನಾಯ್ಕ – ವೀಣಾ ಪೂಜಾರಿ ದಂಪತಿ ನಾಪತ್ತೆಯಾಗಿರುವ ಘಟನೆ ಹೊನ್ನಾವರದಲ್ಲಿ ಆತಂಕ ಸೃಷ್ಠಿಸಿದೆ.
ಕೆರೆಕೋಣದ ಮಂಜುನಾಥ ಗಣಪತಿ ನಾಯ್ಕ ಅವರು ಕಳೆದ 30 ವರ್ಷಗಳಿಂದ ಗೇರುಸೊಪ್ಪ ವಲಯ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಹೊಸದಾಗಿ ಗೇರಸೊಪ್ಪ ಅರಣ್ಯ ವಲಯಕ್ಕೆ ಬಂದ RFO ಕಾರ್ತಿಕ ಕಾಂಬ್ಳೆ ಅವರಿಂದ ಗಂಭೀರ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಮಂಜುನಾಥ ನಾಯ್ಕರು ತಮ್ಮ ಪತ್ನಿ ವೀಣಾ ಪೂಜಾರಿಯೊಂದಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
‘ನಾನು ಚಾಲಕ, ಅಡುಗೆ ಕೆಲಸ ಸಾಧ್ಯವಿಲ್ಲ’ – ಮಂಜುನಾಥರ ಅಹವಾಲು
RFO ಕಾರ್ತಿಕ ಕಾಂಬ್ಳೆ ಅವರು ‘ಇಂದಿನಿಂದ ಡ್ರೈವರ್ ಕೆಲಸ ಬೇಡ, ಕಚೇರಿಯಲ್ಲಿ ಅಡುಗೆ ಮಾಡಬೇಕು’ ಎಂದು ನಿರ್ದೇಶಿಸಿದ್ದಾರೆ ಎಂಬ ಆರೋಪ ಪತ್ರದಲ್ಲಿದೆ. ‘ನಾನು ಚಾಲಕರಾಗಿ ಸೇರಿದ್ದೇನೆ, ಅಡುಗೆ ಕೆಲಸ ಮಾಡಲು ಬರುವುದಿಲ್ಲ’ ಎಂದು ಮಂಜುನಾಥರು ಹೇಳಿದ್ದರೂ, ಕೆಲವು ತಿಂಗಳು ಯಾವುದೇ ಕೆಲಸ ಕೊಡದೆ ಖಾಲಿ ಇರಿಸಿದ್ದರೆಂದು ದಂಪತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಂಜುನಾಥ ನಾಯ್ಕ ಅವರು ಸಂಘದ ರಾಜ್ಯಾಧ್ಯಕ್ಷರಿಗೆ ಬರೆದು ಕಿರುಕುಳದ ಬಗ್ಗೆ ಮನವಿ ಮಾಡಿದ್ದರು. ರಾಜ್ಯಾಧ್ಯಕ್ಷರು ಹಿರಿಯ ಅರಣ್ಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೆಲಸ ಪುನಃ ಕೊಡಿಸುವ ಭರವಸೆ ನೀಡಿದ್ದರೂ, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ ಎಂದು ದೂರಲಾಗಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೂ RFO ಅವಮಾನಕಾರಿ ಪದಗಳನ್ನು ಬಳಸಿ ಅವಹೇಳನ ಮಾಡುತ್ತಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
‘ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ನಿರ್ಧಾರ’ – ಪತ್ರ ಬರೆದಿಟ್ಟು ನಾಪತ್ತೆ
‘ಈ ಅಧಿಕಾರಿಯ ಕಿರುಕುಳದಿಂದ ಬೇಸತ್ತು ನಾವು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಮಂಜುನಾಥ–ವೀಣಾ ದಂಪತಿ ಬರೆದಿರುವ ಪತ್ರ ಪತ್ತೆಯಾಗಿದ್ದು, ಅದೇ ದಿನಾಂಕ 26 ನವೆಂಬರ್ ರಂದು ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬಂಧು ವಿನೋಧ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಂಪತಿಯನ್ನು ಹುಡುಕಿ ಕೊಡಲು ಮನವಿ ಮಾಡಲಾಗಿದೆ.
ಪೊಲೀಸರ ತನಿಖೆ ಮುಂದುವರಿಕೆ
ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ತನಿಖೆ ಆರಂಭಿಸಿದ್ದು, ದಂಪತಿ ನಾಪತ್ತೆಗೆ ನಿಜವಾದ ಕಾರಣವೇನು, ಪತ್ರದಲ್ಲಿರುವ ಆರೋಪಗಳು ಎಷ್ಟು ಸತ್ಯ ಎಂಬುದು ಮುಂದಿನ ತನಿಖೆಯ ಬಳಿಕ ಸ್ಪಷ್ಟವಾಗಲಿದೆ.
ಈ ಘಟನೆ ಅರಣ್ಯ ಇಲಾಖೆಯೊಳಗಿನ ಕೆಲಸದ ಪರಿಸ್ಥಿತಿ ಮತ್ತು ದಿನಗೂಲಿ ನೌಕರರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

