ಕಾರವಾರ: ಕುಮಟಾ ತಾಲೂಕಿನ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತೆರೆದಿರುವ ರೆಸಾರ್ಟ್‌ಗಳಲ್ಲಿ ಮದ್ಯ, ಮಾದಕದ್ರವ್ಯ ಮಾರಾಟದ ಜೊತೆಗೆ ವೇಶ್ಯಾವಾಟಿಕೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ.
ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ನಾಯ್ಕ ಅವರು ಸೋಮವಾರ ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಆರೋಪವನ್ನು ಹೊರಹಾಕಿದರು.
“ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 50ರಿಂದ 60 ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕವು ಹೊರ ರಾಜ್ಯದವರದ್ದು. ಅನಧಿಕೃತವಾಗಿ ನಿರ್ಮಿಸಿ ಯಾವುದೇ ಅನುಮತಿ ಇಲ್ಲದೆ ಮದ್ಯ, ಮಾದಕದ್ರವ್ಯ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಲಂಚ ಪಡೆದು ಕಣ್ಣಮುಚ್ಚಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ವಿರೋಧಕ್ಕೂ ಸರ್ಕಾರದ ಕಿವಿಗೊಡುವವರು ಇಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗರಾಜ ನಾಯ್ಕ ಅವರು, “ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೇ ರೆಸಾರ್ಟ್ ಮಾಲೀಕರ ಪರವಾಗಿ ಮಾತನಾಡಿದ್ದಾರೆ” ಎಂದು ಆರೋಪಿಸಿರುವುದು ಚರ್ಚೆಗೆ ಗುರಿಯಾಗಿದೆ.
ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ ಅವರು, “ನಾಡುಮಾಸ್ಕೇರಿ ವ್ಯಾಪ್ತಿಯ ಸರಕಾರಿ ಜಮೀನುಗಳನ್ನು ಕೆಲವರು ಹೊರ ರಾಜ್ಯದವರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ಐದು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ಕೇವಲ ಸರ್ವೇ ನೆಪ ಮಾಡಲಾಗಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೈವಾಡ ಸ್ಪಷ್ಟವಾಗಿ ಗೋಚರಿಸುತ್ತದೆ,” ಎಂದರು.
ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅನಧಿಕೃತ ಕಟ್ಟಡ ತೆರವು ಮಾಡದಿರುವುದನ್ನು ಅವರು ಖಂಡಿಸಿದರು. “ತಹಸೀಲ್ದಾರರು ಹಾಗೂ ಎಸಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಇಲ್ಲ. ಗೋಮಾಳ ಜಮೀನುಗಳ ಮೇಲೆ ಬೇಲಿ ಹಾಕಿ ಸ್ಥಳೀಯ ರೈತರು ಹಾಗೂ ಮೀನುಗಾರರನ್ನು ಬೆದರಿಸುತ್ತಿದ್ದಾರೆ. ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ವಿಜಯಾ ಕೆ. ನಾಯ್ಕ, ಸದಸ್ಯರು ರವಿ, ಚಂದ್ರಶೇಖರ ನಾಯ್ಕ, ದಯಾನಂದ ಮೆಹ್ತಾ, ನಾಗರಾಜ ತಾಂಡೇಲ, ರಾಜೇಶ ನಾಯ್ಕ, ಗಿರಿಜಾ ಗೌಡ, ಮಾದೇವಿ ಗೌಡ, ಮೀನಾಕ್ಷಿ ಆಗೇರ, ಸವಿತಾ ಆಗೇರ, ರಾಘವೇಂದ್ರ ಗೌಡ ಹಾಗೂ ಇತರರು ಹಾಜರಿದ್ದರು.


