ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಪರ್ಮಿಟ್ ಅವಧಿ ಮುಗಿದಿದ್ದರೂ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 35.5 ಲಕ್ಷ ರೂಪಾಯಿ ಮೌಲ್ಯದ ಮದ್ಯ ಹಾಗೂ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಮಾಜಾಳಿ ಚೆಕ್ಪೋಸ್ಟ್ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ಮಂಗಳೂರು ವಿಭಾಗದ ಜಾರಿ ಮತ್ತು ತನಿಖಾ ಜಂಟಿ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಾಜಾಳಿ ತನಿಖಾ ಠಾಣೆಯ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಶುಕ್ರವಾರ ರಾತ್ರಿ ಸುಮಾರು 11:55ರ ವೇಳೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಕರ್ನಾಟಕದಿಂದ ಗೋವಾ ಕಡೆಗೆ ಸಾಗುತ್ತಿದ್ದ ‘KA-06 B-6025’ ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ರಹದಾರಿ (ಪರ್ಮಿಟ್) ಪತ್ರವನ್ನು ಪರಿಶೀಲಿಸಿದಾಗ ಅದರ ಅವಧಿ ಮಾರ್ಚ್ 10, 2026ರಂದೇ ಮುಕ್ತಾಯಗೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.
ಪರ್ಮಿಟ್ ಅವಧಿ ಮುಗಿದಿದ್ದರೂ ಮದ್ಯ ಸಾಗಾಟ ನಡೆಸಿರುವುದು ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಆಗಿರುವ ಹಿನ್ನಲೆಯಲ್ಲಿ ತಕ್ಷಣವೇ ಕ್ರಮ ಕೈಗೊಂಡ ಅಧಿಕಾರಿಗಳು, ವಾಹನದಲ್ಲಿದ್ದ ಒಟ್ಟು 1200 ರಟ್ಟಿನ ಪೆಟ್ಟಿಗೆಗಳ ಮದ್ಯ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಅಂದಾಜು ಮೌಲ್ಯ 35.5 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಸ್ಥಳದಲ್ಲಿಯೇ ಪಂಚನಾಮೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅಧಿಕಾರಿಗಳು, ವಶಪಡಿಸಿಕೊಂಡ ಮದ್ಯ ಮತ್ತು ಲಾರಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
