ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಮನೆಯ ಬಾಗಿಲಿನ ಬೀಗ ಮುರಿದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಂಜುನಾಥ ನಾಯಕ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 27ರಂದು ಪಟ್ಟಣದ ಅಂಬೇಡ್ಕರ್ ಓಣಿಯ ಬಸವರಾಜ ಚಲವಾದಿ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮಾರಿಕಾಂಬಾ ಜಾತ್ರೆ ನಿಮಿತ್ತ ಪಟ್ಟಣ ವ್ಯಾಪ್ತಿಯ ಜನರು ಹೊರಬೀಡು ಆಚರಣೆಗೆ ತೆರಳಿದ್ದ ಸಂದರ್ಭ, ಮಂಗಳವಾರ 5ನೇ ಹೊರಬೀಡು ನಿಮಿತ್ತ ಮನೆಯವರು ಮನೆಗೆ ಬೀಗ ಹಾಕಿ ಹೋಗಿದ್ದರು. ಈ ವೇಳೆ ಆರೋಪಿಯು ಮನೆಯ ಮುಂಭಾಗದ ಬೀಗ ಮುರಿದು ಒಳನುಗ್ಗಿ, ಮನೆಯಲ್ಲಿದ್ದ ಟ್ರೆಜರಿ ಮುರಿದು ಸುಮಾರು ₹2 ಲಕ್ಷ 44 ಸಾವಿರ ಮೌಲ್ಯದ 14 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಜಗದೀಶ ಎಂ. ಅವರ ಮಾರ್ಗದರ್ಶನದಲ್ಲಿ, ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಶನಿವಾರ ಬೆಳಿಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಕಳ್ಳತನಗೊಳಗಾದ 14 ಗ್ರಾಂ ಬಂಗಾರದ ಆಭರಣಗಳನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ ಚಿಂಚಲಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಮಾಣಿ ಹಾಗೂ ಕಲ್ಲಪ್ಪ ಹೊನ್ನಿಹಳ್ಳಿ ಪಾಲ್ಗೊಂಡಿದ್ದರು. ತಾಲೂಕು ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಎಸ್ಪಿ ಎಂ.ಎನ್. ದೀಪನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

 

Please Share: